ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ (Confident Group) ಚೇರ್ಮನ್ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಸಂಜೆ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.
ಕೇರಳ ಮೂಲದ ಡಾ. ಸಿ.ಜೆ. ರಾಯ್ ಅವರು ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯಾದ ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕರಾಗಿದ್ದರು. ಇಂದು ಸಂಜೆ ಆನೇಪಾಳ್ಯದಲ್ಲಿರುವ ತಮ್ಮ ಕಚೇರಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮಾಹಿತಿ ದೊರೆಯುತ್ತಿದ್ದಂತೆ ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಪದೇಪದೇ ದಾಳಿಗಳಿಂದ ಮನೋವೈಕಲ್ಯಗೊಂಡು ಈ ನಿರ್ಧಾರ ಕೈಗೊಂಡಿರಬಹುದೆಂದು ಶಂಕಿಸಲಾಗಿದೆ. ನಗರದಲ್ಲಿ ಇವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೃತ ಉದ್ಯಮಿಗೆ ಪತ್ನಿ ಲಿನಿ ರಾಯ್ ಹಾಗೂ ರೋಹಿತ್ ಮತ್ತು ರಿಯಾ ಎಂಬ ಇಬ್ಬರು ಮಕ್ಕಳು ಇದ್ದಾರೆ. ಪುತ್ರ ರೋಹಿತ್ ಅವರು ಕಾನ್ಫಿಡೆಂಟ್ ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿನ್ಯಾಸ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.
2005ರಲ್ಲಿ ಸ್ಥಾಪನೆಯಾದ ಕಾನ್ಫಿಡೆಂಟ್ ಗ್ರೂಪ್ ಇದುವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ವಸತಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಸಂಸ್ಥೆ ತನ್ನ ಗುರುತು ಮೂಡಿಸಿದೆ.
ಡಾ. ಸಿ.ಜೆ. ರಾಯ್ ಅವರು ಸ್ವಿಟ್ಜರ್‌ಲ್ಯಾಂಡ್‌ನ SBS ಬಿಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪಡೆದಿದ್ದರು. ಕೇರಳ ಮತ್ತು ಬೆಂಗಳೂರು ಮಾತ್ರವಲ್ಲದೆ ದುಬೈ ಮಾರುಕಟ್ಟೆಯಲ್ಲಿಯೂ ತಮ್ಮ ವ್ಯವಹಾರ ವಿಸ್ತರಿಸಿದ್ದರು.
ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರಾಯ್ ಅವರು ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಮತ್ತು ಕೇರಳದಲ್ಲಿ ಸೇವೆ ಸಲ್ಲಿಸಿದ್ದರು. ಕಾರುಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು, ಭಾರತ ಹಾಗೂ ದುಬೈನಲ್ಲಿ ಹಲವು ದುಬಾರಿ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದ್ದರು.
ಕಾನ್ಫಿಡೆಂಟ್ ಗ್ರೂಪ್ ಇದುವರೆಗೆ 165 ಯೋಜನೆಗಳನ್ನು ಪೂರ್ಣಗೊಳಿಸಿದ್ದು, 43 ಮಿಲಿಯನ್ ಚದರ ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣವನ್ನು ಅಭಿವೃದ್ಧಿಪಡಿಸಿದೆ. 15,000ಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ ಈ ಸಂಸ್ಥೆ ರಿಯಲ್ ಎಸ್ಟೇಟ್ ಜೊತೆಗೆ ಮನರಂಜನೆ, ಶಿಕ್ಷಣ, ಆತಿಥ್ಯ, ಗಲ್ಫ್, ಚಿಲ್ಲರೆ ವ್ಯಾಪಾರ ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ಕ್ಷೇತ್ರಗಳಲ್ಲಿಯೂ ತನ್ನ ವ್ಯವಹಾರ ವಿಸ್ತರಿಸಿದೆ. ಡಾ. ಸಿ.ಜೆ. ರಾಯ್ ಅವರ ಅಕಾಲಿಕ ನಿಧನವು ಉದ್ಯಮ ವಲಯದಲ್ಲಿ ತೀವ್ರ ಆಘಾತ ಉಂಟುಮಾಡಿದೆ.

