ಕೊಲ್ಕತ್ತಾ, : ನವರಾತ್ರಿ ಶುರುವಾಗಿದೆ. ಈ ದಸರಾ ಹಬ್ಬವನ್ನು ಪಶ್ಚಿಮ ಬಂಗಾಳದಲ್ಲಿ ಬಹಳ ವೈಭವದಿಂದ ದುರ್ಗಾಪೂಜೆಯಾಗಿ ಆಚರಿಸಲಾಗುತ್ತದೆ. ಆದರೆ, ಇದೀಗ ಕೊಲ್ಕತ್ತಾದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ಸತತ 5 ಗಂಟೆಗಳ ಕಾಲ ಸುರಿದ ಭಾರೀ ಮಳೆಯಿಂದಾಗಿ 9 ಮಂದಿ ಸಾವನ್ನಪ್ಪಿದ್ದಾರೆ. ತೆರೆದ ತಂತಿಗಳು ಸಿಲುಕಿ ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆಯಿಂದ ನಿರಂತರ ಮಳೆಯಿಂದಾಗಿ ಕೊಲ್ಕತ್ತಾ ಸಂಪೂರ್ಣವಾಗಿ ಮುಳುಗಿ ಹೋಗಿದೆ. ನಗರದ ಬೀದಿಗಳು ಒಂದರ ನಂತರ ಒಂದರಂತೆ ಸೊಂಟದಷ್ಟು ನೀರಿನಲ್ಲಿ ಮುಳುಗಿವೆ.
ಮನೆಯೊಳಗೆ, ಆಸ್ಪತ್ರೆಯೊಳಗೆ ಎಲ್ಲ ಕಡೆಯೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ದುರ್ಗಾಪೂಜೆಗೆಂದು ಹಾಕಲಾಗಿದ್ದ ಪೆಂಡಾಲ್ಗಳಲ್ಲಿ ನೀರು ತುಂಬಿದೆ. ಇಂದು ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ 30ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇನ್ನೆರಡು ದಿನ ಕೊಲ್ಕತ್ತಾದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.

