Road Accident : ಭಾನುವಾರ ರಾತ್ರಿ ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದ ನವೀನ್, ಸಂತೋಷ್ ಮತ್ತು ಲೋಕೇಶ್ ಎಂಬ ಮೂವರು ಯುವಕರು ದುರ್ಘಟನೆಯಾಗಿ ಸಾವನ್ನಪ್ಪಿದ್ದಾರೆ.
ಈ ಅಪಘಾತವು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದು, ಸ್ಥಳೀಯರು ಮತ್ತು ಕುಟುಂಬಸ್ಥರಿಗೆ ಇದು ದೊಡ್ಡ ಆಘಾತವಾಗಿದೆ. ಅಪಘಾತದ ಪರಿಣಾಮವಾಗಿ ಮೂವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದುರ್ಘಟನೆಗಳು ಪುನರಾವರ್ತನೆಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.
ಭಾನುವಾರ (ಮೇ 18) ಸಂತೋಷ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗೆಳೆಯರಾಗಿರುವ ಆರು ಮಂದಿ ಕಾರಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದರು. ಅಲ್ಲಿಂದ ಭಾನುವಾರ ಬೆಳಗ್ಗೆ ಶ್ರೀಶೈಲಕ್ಕೆ ಹೋಗಿ ನಂತರ ಮಹಾನಂದಿ ದರ್ಶನ ಮಾಡಿ ವಾಪಸ್ ಬರುತ್ತಿದ್ದ ವೇಳೆ ರಾತ್ರಿ 7:30ರ ಸುಮಾರಿಗೆ ನಂದ್ಯಾಲ ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟು, ಉಳಿದ ಮೂವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಗಾಯಗೊಂಡ ಮೂವರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರವಪಲ್ಲಿ ಬಳಿ ಭಾನುವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಕರ್ನಾಟಕ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಅಪಘಾತ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಬಾವಿಗೆ ಬಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುತ್ತಕದಲ್ಲಿಯ ಲೋಕೇಶ್, ಚಂದ್ರನಹಳ್ಳಿ ನಿವಾಸಿ ಶಿವಾನಂದ ಹಾಗೂ ಕೋಲಾರ ಜಿಲ್ಲೆಯ ಸುಗಟೂರಿನ ಚಲಪತಿ ಮೃತಪಟ್ಟಿದ್ದರು.
ವರದಿ : ಮಂಜು ಗುರುಗದಹಳ್ಳಿ

