ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಯಾಗಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಈ ಕುರಿತು ಅಫ್ಘಾನಿಸ್ತಾನದ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿವೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲೇ ಕೊಲೆಯಾಗಿದ್ದಾರೆ ಎಂಬ ದಾವೆ ಅಫ್ಘಾನ್ ಮಾಧ್ಯಮಗಳ ವರದಿಯಲ್ಲಿ ಮಾಡಲಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೇಗವಾಗಿ ಹಬ್ಬಿದೆ. ಆದರೆ ಪಾಕಿಸ್ತಾನ ಸರ್ಕಾರ ಅಥವಾ ಪಾಕ್ ಸೇನೆಯಿಂದ ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.
ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ತನ್ನ ಎಕ್ಸ್ ಪೋಸ್ಟ್‌ನಲ್ಲಿ, ಪಾಕಿಸ್ತಾನಿ ಆಡಳಿತವು ಜೈಲಿನಲ್ಲೇ ಇಮ್ರಾನ್ ಖಾನ್ ಅವರನ್ನು ಕೊಂದಿದ್ದು ಎಂಬ ಆರೋಪ ಕೇಳಿಬಂದಿದೆ ಎಂದು ತಿಳಿಸಿದೆ. ಈ ನಡುವೆ, ಇಮ್ರಾನ್ ಖಾನ್ ಬೆಂಬಲಿಗರು ಹಾಗೂ ಪಾಕಿಸ್ತಾನ ತೆಹ್ರೀಕ್–ಇ–ಇನ್ಸಾಫ್ (ಪಿಟಿಐ) ಪಕ್ಷದ ಹಲವು ಸಾವಿರ ಮಂದಿ ತಮ್ಮ ನಾಯಕನ ಬಗ್ಗೆ ಮಾಹಿತಿ ಪಡೆಯಲು ಅಡಿಯಾಲಾ ಜೈಲಿನತ್ತ ಧಾವಿಸಿರುವ ಬಗ್ಗೆ ವರದಿಯಾಗಿದೆ. ಇದರ ಪರಿಣಾಮವಾಗಿ ಪಾಕಿಸ್ತಾನ ಮಿಲಿಟರಿ ಆಡಳಿತವು ಸಾರ್ವಜನಿಕ ಒತ್ತಡಕ್ಕೆ ಒಳಗಾಗಿದೆ ಎಂದು ತಿಳಿದುಬಂದಿದೆ.
ಜೈಲಿನ ಭದ್ರತೆ ಹೆಚ್ಚಿಸಲು ನೂರಾರು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ವರದಿ ಹೇಳಿದೆ. ಪಿಟಿಐ ಬೆಂಬಲಿಗರ ಪ್ರಕಾರ, ಮಿಲಿಟರಿ ಆಡಳಿತದ ದಬ್ಬಾಳಿಕೆಯನ್ನು ಮುರಿದು ಹಾಕುವ ಮೂಲಕ ತಮ್ಮ ನಾಯಕನ ನಿಜಸ್ಥಿತಿಯನ್ನು ಬಹಿರಂಗಪಡಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆಗೆ ದಾರಿ ಮಾಡಿಕೊಡಬಹುದು ಎಂಬ ನಂಬಿಕೆ ಹೆಚ್ಚುತ್ತಿದೆ.
ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಪಾಕಿಸ್ತಾನ ಸೇನೆಯ ಮೂಲವೊಂದು, ಇಮ್ರಾನ್ ಖಾನ್ 17 ದಿನಗಳ ಹಿಂದೆಯೇ ಜೈಲಿನಲ್ಲಿ ನಿಗೂಢವಾಗಿ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿಸಿದೆ. ಇದೇ ವೇಳೆ, ಇಮ್ರಾನ್ ಖಾನ್ ಅವರ ಕುಟುಂಬದ ಓರ್ವ ಸದಸ್ಯರು, ಕಳೆದ 23 ದಿನಗಳಿಂದ ಜೈಲು ಭೇಟಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವರ್ಷದ ಮೇ ತಿಂಗಳಲ್ಲೂ ಇಮ್ರಾನ್ ಖಾನ್ ಸಾವಿನ ಬಗ್ಗೆ ಇದೇ ರೀತಿಯ ವರದಿಗಳು ಹಬ್ಬಿದ್ದರೂ, ನಂತರ ಅವು ಸುಳ್ಳು ಎಂದು ದೃಢಪಟ್ಟಿತ್ತು.

