ನವದೆಹಲಿ : ಜಮ್ಮು ಮತ್ತು ಕಾಶ್ಮೀರ, ಗೋವಾ ಮತ್ತು ಮೇಘಾಲಯದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಮಂಗಳವಾರ, 5 ಆಗಸ್ಟ್ 2025 ರಂದು ನಿಧನರಾದರು. ಅವರು ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರು.
ವಯೋಸಹಜ ಅನಾರೋಗ್ಯದಿಂದ ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯಪಾಲ್ ಮಲಿಕ್ ಅವರು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸತ್ಯಪಾಲ್ ಮಲಿಕ್ ಅವರ ಆಪ್ತ ಕಾರ್ಯದರ್ಶಿ ಕೆ.ಎಸ್. ರಾಣಾ ಈ ಮಾಹಿತಿಯನ್ನು ನೀಡಿದ್ದಾರೆ.
ಸತ್ಯಪಾಲ್ ಮಲಿಕ್ ಅವರ ನಿಧನದ ಬಗ್ಗೆ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಸತ್ಯಪಾಲ್ ಮಲಿಕ್ ಬಿಹಾರದ ರಾಜ್ಯಪಾಲರೂ ಆಗಿದ್ದರು. ಅಧಿಕೃತ ಮಾಹಿತಿಯ ಪ್ರಕಾರ, ಸತ್ಯಪಾಲ್ ಮಲಿಕ್ ಅವರಿಗೆ ಮೂತ್ರಪಿಂಡದ ಸಮಸ್ಯೆ ಇತ್ತು. ಕೃಷಿ ಚಳುವಳಿ, ಭ್ರಷ್ಟಾಚಾರ ಮತ್ತು ಅನೇಕ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಅವರು ತಮ್ಮ ಬಹಿರಂಗ ಅಭಿಪ್ರಾಯಕ್ಕಾಗಿ ಸುದ್ದಿಯಾಗಿದ್ದರು.
1970ರಲ್ಲಿ ಶಾಸಕನಾಗಿ ರಾಜಕೀಯ ಪ್ರವೇಶ ಮಾಡಿದ ಸತ್ಯಪಾಲ್ ಮಾಲಿಕ್ ಅವರು ರಾಜಕೀಯದಲ್ಲಿ 50 ವರ್ಷಗಳನ್ನೇ ಕಳೆದಿದ್ದಾರೆ. ಪಶ್ಚಿಮ ಉತ್ತರಪ್ರದೇಶದ ಬಾಘಪತ್ ನಿವಾಸಿಯಾಗಿದ್ದ ಅವರು ಹಲವು ಪಕ್ಷಗಳನ್ನು ಬದಲಾಯಿಸಿದ್ದಾರೆ. ಮೊದಲ ಬಾರಿಗೆ ಅವರು ಚೌಧರಿ ಚರಣ್ ಸಿಂಗ್ ಅವರ ಭಾರತೀಯ ಕ್ರಾಂತಿ ದಳದಿಂದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.
1980ರಲ್ಲಿ, ಚರಣ್ ಸಿಂಗ್ ನೇತೃತ್ವದ ಲೋಕದಳದಿಂದ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ 1984 ರಲ್ಲಿ, ಅವರು ಕಾಂಗ್ರೆಸ್ ಸೇರಿದರು, ಕಾಂಗ್ರೆಸ್‌ನಿಂದ ಅವರು 1986 ರಲ್ಲಿ ರಾಜ್ಯಸಭೆಗೆ ಪ್ರವೇಶಿಸಿದರು. ಜಮ್ಮುಕಾಶ್ಮೀರದ 370 ನೇ ಕಲಂ ರದ್ದಾಗುವುದರೊಂದಿಗೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಅವರ ಒಂದು ವರ್ಷದ ಅವಧಿ ಕೊನೆಗೊಂಡಿತ್ತು. ಇದಕ್ಕೂ ಮೊದಲು ಅವರು ಗೋವಾ ಮತ್ತು ಮೇಘಾಲಯದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು.

