ಮುಂಬೈ: ಮೀಸಲಾತಿಯನ್ನು ಕೊನೆಗೊಳಿಸುವ ಕುರಿತು ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಘೋಷಿಸಿದ್ದಾರೆ.
ರಾಹುಲ್ ಗಾಂಧಿ ಅವರು ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಬಯಸುತ್ತಾರೆ. ಇದನ್ನು ವಿದೇಶದಲ್ಲಿ ಹೋಗಿ ಹೇಳುತ್ತಾರೆ. ಈ ಹೇಳಿಕೆ ಕಾಂಗ್ರೆಸ್ನ ಅಸಲಿ ಮುಖವನ್ನು ಬಯಲು ಮಾಡಿದೆ. ರಾಹುಲ್ ಗಾಂಧಿ ಅವರು ಹೇಳಿಕೆಗಳು ವಿಶ್ವಾಸಘಾತುಕತನವಾಗಿದೆ. ಮರಾಠರು, ಧಂಗರುಗಳು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿವೆ. ಆದರೆ ಅದಕ್ಕೂ ಮೊದಲು ಅದರ ಪ್ರಯೋಜನಗಳನ್ನು ಕೊನೆಗೊಳಿಸುವ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ರಾಹುಲ್ ಗಾಂಧಿಯವರು ಸಂವಿಧಾನದ ಪುಸ್ತಕವನ್ನು ತೋರಿಸಿ ಬಿಜೆಪಿ ಅದನ್ನು ಬದಲಾಯಿಸುತ್ತದೆ ಎಂದು ಸುಳ್ಳು ಕಥೆಯನ್ನು ಹರಡುತ್ತಿದ್ದರು. ಆದರೆ ಕಾಂಗ್ರೆಸ್ ದೇಶವನ್ನು 400 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಲು ಯೋಜಿಸುತ್ತಿದೆ ಎಂದು ಆರೋಪಿಸಿದರು.
ವಿದರ್ಭ ಪ್ರದೇಶದ ಬುಲ್ಧಾನ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿರುವ ಸಂಜಯ್ ಗಾಯಕ್ವಾಡ್ ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲನೆಲ್ಲ. ಕಳೆದ ತಿಂಗಳು ಶಾಸಕ ಸಂಜಯ್ ಅವರ ಕಾರನ್ನು ಪೊಲೀಸರು ತೊಳೆಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ನಂತರ ಸ್ಪಷ್ಟನೆ ನೀಡುವಾಗ ಗಾಯಕ್ವಾಡ್ ಅವರು ಪೊಲೀಸರು ಕಾರಿನೊಳಗೆ ವಾಂತಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.

