ಮುಂಬೈ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಶಿವಸೇನಾ (ಯುಬಿಟಿ) ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮಂಗಳವಾರ ನಾಗ್ಪುರದ ವಿಧಾನ ಭವನದಲ್ಲಿ ಭೇಟಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಅವರು, ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ವೀರ ಸಾವರ್ಕರ್ ಮೇಲೆ ಮತ್ತು ಬಿಜೆಪಿ ನೆಹರು ಮೇಲೆ ವಿನಾಕಾರಣ ಆಪಾದನೆ ಮಾಡಬಾರದು. ಈ ಮಹಾಪುರುಷರ ಬಗ್ಗೆ ಮಾತನಾಡುವುದನ್ನು ಬಿಟ್ಟು, ಭವಿಷ್ಯದ ಬಗ್ಗೆ ಮಾತನಾಡಬೇಕು. ವೀರ ಸಾವರ್ಕರ್‌ಗೆ ಬಿಜೆಪಿ ಭಾರತ ರತ್ನ ನೀಡುವುದು ಯಾವಾಗ? ದೇವೇಂದ್ರ ಫಡ್ನವಿಸ್ ಕೂಡ 2019ರಲ್ಲಿ ಈ ಬಗ್ಗೆ ಪತ್ರ ಬರೆದಿದ್ದರು, ಅದು ಏನಾಯಿತು? ಆಗಲೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದರು ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.
ಈ ಹಿಂದೆ ಡಿಸೆಂಬರ್ 14ರಂದು ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ರಾವತ್ ಕೂಡ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದರು. ಕಾಂಗ್ರೆಸ್ ಯಾವಾಗಲೂ ವೀರ ಸಾವರ್ಕರ್ ವಿರುದ್ಧವಾಗಿದೆ. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಕಾಂಗ್ರೆಸ್ ತನ್ನ ಮರಾಠಿ ಮಾಸಿಕ ಪತ್ರಿಕೆಯಾದ ‘ಶಿಡೋರಿ’ಯಲ್ಲಿ ವೀರ ಸಾವರ್ಕರ್‌ಗೆ ‘ಮಾಫಿ ವೀರ್’ ಎಂದು ಬರೆದಿತ್ತು.
“ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ನಾನು ಸಲಹೆ ನೀಡುತ್ತೇನೆ. ಕಾಂಗ್ರೆಸ್ ವೀರ ಸಾವರ್ಕರ್ ಅವರನ್ನು ಗುರಿಯಾಗಿಸುವುದು ನಿಲ್ಲಿಸಬೇಕು ಮತ್ತು ಬಿಜೆಪಿ ನೆಹರೂ ಅವರನ್ನು ಗುರಿಯಾಗಿಸುವುದು ನಿಲ್ಲಿಸಬೇಕು. ಭೂತಕಾಲದ ಬಗ್ಗೆ ಯೋಚಿಸುವ ಬದಲು ನಾವು ಭವಿಷ್ಯವನ್ನು ನಿರ್ಮಿಸುವತ್ತ ಗಮನ ಹರಿಸಬೇಕು. ಇಬ್ಬರೂ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಅವರ ಕಾಲದಲ್ಲಿ ಮಾಡಿರುವುದು ಅವರ ಯುಗಕ್ಕೆ ಸೂಕ್ತವಾಗಿದೆ. ಆದ್ದರಿಂದ ಪ್ರಧಾನಿ ಮೋದಿ ಅವರು ನೆಹರೂ ಹೆಸರನ್ನು ಪದೇ ಪದೇ ಹೇಳುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.