ಮಂಡ್ಯ: ಎರಡು ವರ್ಷಗಳ ನಂತರ ಭರ್ತಿಯಾಗಿರುವ ಕೆಆರ್‌ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಭಿಜಿತ್ ಲಗ್ನದಲ್ಲಿ ಬಾಗಿನ ಅರ್ಪಿಸಿದರು.
ಇಂದು ಕೆಆರ್ ಎಸ್ ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ಬಾಗಿನ ಅರ್ಪಿಸಿದರು. ಮುಖ್ಯಮಂತ್ರಿಗಳಿಗೆ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ ಎಚ್.ಸಿ ಮಹದೇವಪ್ಪ, ವೆಂಕಟೇಶ್ ಸೇರಿ ಸೇರಿದಂತೆ ಹಳೇ ಮೈಸೂರು ಭಾಗದ ಸಚಿವರು, ಶಾಸಕರು ಸಾಥ್ ನೀಡಿದರು. ವೈದಿಕ ಬಾನು ಪ್ರಕಾಶ್ ಶರ್ಮಾರಿಂದ ಪೂಜಾ ಕಾರ್ಯ ನೆರವೇರಿತು. ಜಲಾಶಯಕ್ಕೆ ಕ್ಷೀರಾಭಿಷೇಕ ಪುಷ್ಪಾರ್ಚನೆ ಮಾಡಲಾಯಿತು.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಮೂರನೇ ಬಾರಿಗೆ ಕೆಆರ್‌ಎಸ್ ಗೆ ಬಾಗಿನ ಅರ್ಪಿಸಿದ್ದಾರೆ. ಮೊದಲ ಬಾರಿಗೆ ಸಿಎಂ ಆದಾಗ 2013 ಹಾಗೂ 2014 ರಲ್ಲಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದರು. ಆನಂತರ ಬರಗಾಲ ಹಿನ್ನೆಲೆ ಜಲಾಶಯ ಭರ್ತಿಯಾಗಿರಲಿಲ್ಲ. ಎರಡನೇ ಅವಧಿಗೂ ಸಿಎಂ ಆದಗಲೂ 2023ರಲ್ಲಿ ಕನ್ನಂಬಾಡಿ ಅಣೆಕಟ್ಟು ಭರ್ತಿಯಾಗಿರಲಿಲ್ಲ. ಈ ವರ್ಷ ಸಂಪೂರ್ಣ ಭರ್ತಿಯಾಗಿದ್ದು ಬಾಗಿನ ಅರ್ಪಿಸಿದ್ದಾರೆ.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಹಿಂದೆ ಮಳೆ ಬರದೇ ಇದ್ದಾಗ ವಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಸಿದ್ದರಾಮಯ್ಯ ಅವರ ಕಾಲ್ಗುಣದಿಂದ ಸಮೃದ್ಧ ಮಳೆಯಾಗುತ್ತಿದೆ. ಎಲ್ಲಾ ಜಲಾಶಯಗಳೂ ತುಂಬಿ ತುಳುಕುತ್ತಿವೆ ಎಂದು ತಿರುಗೇಟು ನೀಡಿದರು.ಕಾವೇರಿ ನದಿಪಾತ್ರದಲ್ಲಿನ ರೈತರ ಹಿತರಕ್ಷಣೆಗೆ ನಮ ಸರ್ಕಾರ ಬದ್ಧವಾಗಿದೆ. ಬೆಳೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.
ಮುಂದಿನ ವರ್ಷದಿಂದ ಕೆಆರ್‌ಎಸ್ ಅಣೆಕಟ್ಟೆ ತುಂಬಿದ ವೇಳೆಯಲ್ಲಿ ಬಾಗಿನ ಅರ್ಪಿಸುವ ಸಂದರ್ಭದಲ್ಲೇ ಕಾರ್ಯಕ್ರಮ ಆಯೋಜನೆ ಮಾಡಿ 5 ಮಂದಿಗೆ ಪ್ರಶಸ್ತಿ ನೀಡಲಾಗುವುದು. ರೈತರಿಗೆ ಸಮರ್ಪಕವಾದ ನೀರು ಪೂರೈಕೆ ಮಾಡುವ 3 ಜನ ಸವಡಿಯರಿಗೆ ಒಬ್ಬ ಪ್ರಗತಿಪರ ರೈತ ಹಾಗೂ ಮತ್ತೊಬ್ಬ ಕಿರಿಯ ಎಂಜಿನಯರ್‌ಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

