ತುಮಕೂರು : ಸಿಎಂ ಸಿದ್ದರಾಮಯ್ಯ ಅವರ ಸಂಪುಟದಿಂದ ವಜಾಗೊಂಡಿರುವ ಮಧುಗಿರಿಯ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಆಗ್ರಹಿಸಿದ್ದಾರೆ.
ಸಂಪುಟದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಈಗ ಮುಂದೇನು ಮಾಡಬಹುದು ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ರಾಜಣ್ಣ ಮೊದಲೇ ಬಂಡಾಯ ಸ್ವಭಾವದವರು. ಹಾಗಾಗಿ ಅವರು ಸುಮ್ಮನೇ ಇರುವ ಜಾಯಮಾನದವರಲ್ಲ ಎಂಬುವುದು ಕಾಂಗ್ರೆಸ್ ನಾಯಕರಿಗೂ ಗೊತ್ತು.
ಶೀಘ್ರವೇ ರಾಜಣ್ಣ ದೆಹಲಿ ಫ್ಲೈಟ್ ಹತ್ತಲಿದ್ದು, ಮರಳಿ ಸಂಪುಟ ಸೇರುತ್ತೇನೆ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಇದರ ಮಧ್ಯೆ ರಾಜಣ್ಣ ಪರ ಸಿದ್ದಗಂಗಾ ಶ್ರೀಗಳು ಬ್ಯಾಟ್ ಬೀಸಿದ್ದಾರೆ. ರಾಜಣ್ಣರನ್ನು ಸಂಪುಟದಿಂದ ವಜಾಗೊಳಿಸಿರುವುದು ತೀವ್ರ ಆಘಾತ ಉಂಟು ಮಾಡಿದ್ದು, ಮರಳಿ ರಾಜಣ್ಣರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಿದ್ದಲಿಂಗ ಸ್ವಾಮೀಜಿಯವರು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದಗಂಗಾ ಶ್ರೀಗಳು, ತುಮಕೂರು ಜಿಲ್ಲೆಯಿಂದ ರಾಜಣ್ಣ ಮತ್ತು ಡಾ.ಜಿ. ಪರಮೇಶ್ವರ್ ಸಚಿವ ಸಂಪುಟದಲ್ಲಿದ್ದರು. ಇಬ್ಬರು ಉತ್ತಮ ಕೆಲಸ ಮಾಡುತ್ತಿದ್ದರು. ಏಕಾಏಕಿ ರಾಜಣ್ಣರನ್ನು ವಜಾಗೊಳಿಸಿರುವುದು ತೀವ್ರ ಆಘಾತ ತಂದಿದೆ ಎಂದಿದ್ದಾರೆ.
ಸಹಕಾರಿ ಕ್ಷೇತ್ರದಿಂದ ಮೇಲೆ ಬಂದ ರಾಜಣ್ಣ ರೈತರಿಗೆ, ಜನಸಾಮಾನ್ಯರಿಗೆ ಹಾಗೂ ಸಂಘಟನೆಗಳಿಗೆ ಹೆಚ್ಚು ಸಹಾಯ ಮಾಡಬಹುದು ಎಂಬ ಕಾರಣಕ್ಕಾಗಿ ಸಹಕಾರ ಖಾತೆ ಪಡೆದು ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಅಧಿವೇಶನದ ಆರಂಭದ ಮೊದಲ ದಿನವೇ ಸಂಪುಟದಿಂದ ಕೈಬಿಟ್ಟಿರುವುದನ್ನು ಕೇಳಿ ಆಘಾತವಾಯಿತು. ಪಕ್ಷದ ಹೈಕಮಾಂಡ್‌ನ ನಿರ್ಧಾರದಂತೆ ಸಂಪುಟದಿಂದ ವಜಾಗೊಳಿಸಿರುವುದಾಗಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

