ಬೆಂಗಳೂರು, ನವೆಂಬರ್ 29: ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ನೇತೃತ್ವ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಳಿಗ್ಗೆ ಮಹತ್ವದ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿ ರಾಜ್ಯ ರಾಜಕೀಯಕ್ಕೆ ಹೊಸ ಚಲನೆಯನ್ನು ತಂದಿದ್ದಾರೆ.
ಪಕ್ಷದ ಒಳಾಂಗಣ ಕಲಹ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹೈಕಮಾಂಡ್ ಇಬ್ಬರು ನಾಯಕರಿಗೂ ತಕ್ಷಣ ಭೇಟಿಯಾಗಿ ವಿವಾದಗಳಿಗೆ ತೆರೆ ಎಳೆಯುವಂತೆ ಸೂಚಿಸಿತ್ತು. ಅದರಂತೆ ಇಬ್ಬರೂ ಬೆಳಿಗ್ಗೆ ಒಂದೇ ಟೇಬಲ್‌ನಲ್ಲಿ ಕುಳಿತು ಚರ್ಚಿಸಿದರು.
ಮೀಟಿಂಗ್ ನಂತರ ಸಿದ್ದರಾಮಯ್ಯ ಮಾತನಾಡಿ, “ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ” ಎಂದು ಸ್ಪಷ್ಟಪಡಿಸಿದರು. ಪದಾಧಿಕಾರ ಹಂಚಿಕೆ ಕುರಿತ ತೀರ್ಮಾನವನ್ನು ದೆಹಲಿ ನಾಯಕತ್ವ ತೆಗೆದುಕೊಳ್ಳಲಿದೆ ಎಂದರು.
ಡಿಕೆಶಿಯೂ ಮಾತಿನಲ್ಲಿ ಇದೇ ಭಾವ ವ್ಯಕ್ತಪಡಿಸಿ,“ಜನರು ಏನು ಹೇಳಿದರೂ, ನಮ್ಮ ನಿರ್ಧಾರ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ” ಎಂದು ಹೇಳಿದರು. ತೀವ್ರ ರಾಜಕೀಯ ಒತ್ತಡದ ನಡುವೆಯೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೂಚಿಸಿದರು.
ಒಗ್ಗಟ್ಟು ಸಂದೇಶ – ಫೋಟೋ ಹಂಚಿದ ಇಬ್ಬರು ನಾಯಕರು
ಮೀಟಿಂಗ್ ನಂತರ ಇಬ್ಬರೂ ನಾಯಕರೂ ಒಟ್ಟಿಗೆ ತೆಗೆಸಿಸಿಕೊಂಡ ಫೋಟೋವನ್ನು ಹಂಚಿಕೊಂಡಿದ್ದು, ಪಕ್ಷದಲ್ಲಿ ಒಗ್ಗಟ್ಟು ಕಾಪಾಡಲು ಇದು ಮಹತ್ವದ ಸಂಕೇತವೆಂದು ವಿಶ್ಲೇಷಕರು ಹೇಳಿದ್ದಾರೆ.
ದೆಹಲಿ ಸಾಧನೆಯಿಂದ ಅಂತಿಮ ತೀರ್ಮಾನ?
ಬ್ರೇಕ್‌ಫಾಸ್ಟ್ ಸಭೆಯ ನಂತರ ಡಿಕೆ ಶಿವಕುಮಾರ್ ದೆಹಲಿ ಭೇಟಿ ಮಾಡುವ ಸಾಧ್ಯತೆ ವ್ಯಕ್ತವಾಗಿದೆ. ಅಲ್ಲಿ ಹೈಕಮಾಂಡ್ ಜೊತೆ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿರ್ಣಾಯಕ ಚರ್ಚೆ ನಡೆಯುವ ಸಾಧ್ಯತೆ ಇದೆ.
ಹೈಕಮಾಂಡ್ ಅಂಗಳಕ್ಕೆ ಕುರ್ಚಿ ಆಟ :
ರಾಜ್ಯ ರಾಜಕೀಯದಲ್ಲಿ ಕುರ್ಚಿ ಕಾಳಗ ತೀವ್ರತೆ ಪಡೆದಿರುವ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆಗೆ ಮುಖಾಮುಖಿಯಾಗುತ್ತಿದ್ದಾರೆ. ಇಬ್ಬರು ನಾಯಕರ ನಡುವಿನ ಬ್ರೇಕ್‌ಫಾಸ್ಟ್ ಸಭೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕೈ ಹೈಕಮಾಂಡ್‌ನ ತಾಕೀತಿನ ಮೇರೆಗೆ ಸಿಎಂ ಕಾವೇರಿ ನಿವಾಸದಲ್ಲಿ ನಡೆಯಲಿರುವ ಈ ಉಪಹಾರ ಸಭೆ ಅತ್ಯಂತ ಮಹತ್ವ ಪಡೆದಿದ್ದು, ಇಬ್ಬರು ನಾಯಕರು ನೇರವಾಗಿ ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸಿದ್ದರಾಮಯ್ಯ–ಡಿಕೆಶಿ ನಡುವಿನ ಹೊಂದಾಣಿಕೆಗೆ ವರಿಷ್ಠರು ನಿರಂತರ ಕಸರತ್ತು ನಡೆಸುತ್ತಿದ್ದಾರೆ.
ಸಭೆಗೆ ಸಿಎಂ ನಿವಾಸದಲ್ಲಿ ಈಗಾಗಲೇ ಸಿದ್ಧತೆಗಳಾಗಿದ್ದು, ಇಬ್ಬರ ಚರ್ಚೆಯ ವರದಿ ಆಧರಿಸಿ ಹೈಕಮಾಂಡ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಇಂದು ಸಂಜೆ ಅಥವಾ ನಾಳೆ ದೆಹಲಿ ನಾಯಕರಿಂದಲೂ ವಿಶೇಷ ಸಭೆ ನಡೆಯುವ ಸಾಧ್ಯತೆಗಳು ವ್ಯಕ್ತವಾಗಿವೆ.
ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಈ ಜೋಡೆತ್ತುಗಳ ಉಪಹಾರ ಸಭೆ ರಾಜ್ಯ ಸರ್ಕಾರದ ಭವಿಷ್ಯಕ್ಕೆ ತಿರುವು ತರುವ ಸಭೆಯಾಗಬಹುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

