ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ನಕಲಿ ವೈದ್ಯರ ಜಾಲದ ಬಗ್ಗೆ ನಾವು ವರದಿ ಮಾಡುತ್ತಲೇ ಬಂದಿದ್ದೇವೆ. ಆದರೆ ಇಂದು ನಾವು ಬಯಲಿಗೆಳೆಯುತ್ತಿರುವ ಈ ಸುದ್ದಿ ಕೇಳಿದರೆ ನೀವು ದಂಗಾಗುತ್ತೀರಿ! ಸಾಕ್ಷಾತ್ ಜನಪ್ರತಿನಿಧಿಗಳ ಕಣ್ಣೆದುರೇ, ಕೇವಲ ಹತ್ತನೇ ತರಗತಿ ಓದಿದವನೊಬ್ಬ ರಾಜಾರೋಷವಾಗಿ ‘ಬಾಡಿ ಅಲೈನ್‌ಮೆಂಟ್’ ಹೆಸರಲ್ಲಿ ದಂಧೆ ನಡೆಸುತ್ತಿದ್ದಾನೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಯಾಕೆ ಕುಂಭಕರ್ಣ ನಿದ್ರೆಯಲ್ಲಿದ್ದಾರೆ? ಇಲ್ಲಿದೆ ನೋಡಿ ಈ ಬಗ್ಗೆ ನಮ್ಮ ವಿಶೇಷ ವರದಿ.”
ಹತ್ತನೇ ತರಗತಿ ಪಾಸು.. ವೈದ್ಯಕೀಯ ಲೋಕಕ್ಕೆ ಇವನೇ ಬಾಸ್!
ಇದು ಬಾಗಲಕೋಟೆ ಜಿಲ್ಲೆಯ ತೆರದಾಳ ಮತಕ್ಷೇತ್ರದ, ಸ್ಥಳೀಯ ಶಾಸಕರಾದ ಸಿದ್ದು ಸವದಿ ಅವರ ತವರು ಗ್ರಾಮ ಬನಹಟ್ಟಿ. ಇಲ್ಲಿನ ಶಿವಾನಂದ ಹಳಿಂಗಳಿ ಎಂಬ ವ್ಯಕ್ತಿಯೇ ಇಂದಿನ ನಮ್ಮ ಸುದ್ದಿಯ ‘ಹೀರೋ’. ಹೌದು, ಈತ ಓದಿರುವುದು ಕೇವಲ ಹತ್ತನೇ ತರಗತಿ! ಆದರೆ ಈತ ಮಾಡುವ ಹಾವಭಾವಗಳು ಮಾತ್ರ ಯಾವುದೋ ದೊಡ್ಡ ಸರ್ಜನ್ ಮಟ್ಟಕ್ಕಿದೆ. ಯಾವುದೇ ಅಧಿಕೃತ ಪದವಿ ಇಲ್ಲ, ಮೆಡಿಕಲ್ ಕೌನ್ಸಿಲ್‌ನ ಸರ್ಟಿಫಿಕೇಟ್ ಇಲ್ಲ, ಆದರೂ ಈತ ‘ಬಾಡಿ ಅಲೈನ್‌ಮೆಂಟ್’ ಹೆಸರಲ್ಲಿ ಜನರ ದೇಹದ ಮೇಲೆ ಪ್ರಯೋಗ ಮಾಡುತ್ತಿದ್ದಾನೆ.
ಅವೈಜ್ಞಾನಿಕ ಚಿಕಿತ್ಸೆ – ಜೀವಕ್ಕೆ ಕಂಟಕ!
ವಿಜ್ಞಾನದ ಅರಿವಿಲ್ಲದೆ, ನರಮಂಡಲದ ಜ್ಞಾನವಿಲ್ಲದೆ ಕೇವಲ ಕೈಚಳಕದಿಂದ ಮೂಳೆಗಳನ್ನು ಸರಿಸುವ ಈತನ ಪದ್ಧತಿ ಅತ್ಯಂತ ಅಪಾಯಕಾರಿ. ಬೆನ್ನು ಮೂಳೆಯ ಮೇಲೆ ಈತ ಮಾಡುವ ಪ್ರಯೋಗಗಳು ರೋಗಿಯನ್ನು ಶಾಶ್ವತವಾಗಿ ಹಾಸಿಗೆ ಹಿಡಿಯುವಂತೆ ಮಾಡಬಲ್ಲವು. ಆದರೂ, ಶಾಸಕರ ತವರಲ್ಲೇ ಈ ಅಕ್ರಮ ನಡೆಯುತ್ತಿದ್ದರೂ ಯಾರಿಗೂ ಗೊತ್ತಿಲ್ಲದಂತೆ ಇರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಅಧಿಕಾರಿಗಳಿಗೆ
ವರದಿಯ ಮೂಲಕ ನಾವು ಜಿಲ್ಲಾ ಆರೋಗ್ಯ ಇಲಾಖೆಯನ್ನು ಕೇಳುತ್ತಿರುವ ಪ್ರಶ್ನೆಗಳು ಇಲ್ಲಿವೆ..
ಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರ ಗಮನಕ್ಕೆ ಈ ವಿಷಯ ಬಂದಿಲ್ಲವೇ? ಬಂದಿದ್ದರೂ ಮೌನವಾಗಿದ್ದಾರೆಯೇ?
ಜಿಲ್ಲಾ ಆರೋಗ್ಯ ಅಧಿಕಾರಿಗಳು (DHO) ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು (THO) ಈ ಅಕ್ರಮ ಕೇಂದ್ರದ ಮೇಲೆ ದಾಳಿ ಮಾಡಲು ಯಾವುದಕ್ಕೆ ಕಾಯುತ್ತಿದ್ದಾರೆ? ಅಧಿಕಾರಿಗಳ ಈ ಮೌನದ ಹಿಂದೆ ಯಾವುದಾದರೂ ರಾಜಕೀಯ ಪ್ರಭಾವವಿದೆಯೇ ಅಥವಾ ನಕಲಿ ವೈದ್ಯನ ಬೆನ್ನಿಗೆ ಯಾರಾದರೂ ನಿಂತಿದ್ದಾರೆಯೇ?
“ಹತ್ತನೇ ತರಗತಿ ಓದಿದವನು ಚಿಕಿತ್ಸೆ ನೀಡಿ ಏನಾದರೂ ಅನಾಹುತವಾದರೆ ಅದಕ್ಕೆ ಹೊಣೆ ಯಾರು? ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಎಷ್ಟು ಸರಿ? ಇನ್ನಾದರೂ ಸಂಬಂಧಪಟ್ಟ THO ಮತ್ತು DHO ಅಧಿಕಾರಿಗಳು ಎಚ್ಚೆತ್ತುಕೊಂಡು ಈತನ ಮೇಲೆ ಕಾನೂನು ಕ್ರಮ ಜರುಗಿಸುತ್ತಾರಾ? ಅಥವಾ ಅನಾಹುತ ಸಂಭವಿಸುವವರೆಗೆ ಕಾಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

