ಬೆಂಗಳೂರು: ಕರ್ನಾಟಕದಲ್ಲಿ 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಆರಂಭವಾಗಿ ಏಪ್ರಿಲ್ 2ರವರೆಗೆ ನಡೆಯಲಿದ್ದು, ಮೇ 8ರೊಳಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.
ಪರೀಕ್ಷೆಗಳು ಪಾರದರ್ಶಕವಾಗಿ, ನ್ಯಾಯಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯುವಂತೆ ಮಾಡಲು ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಣಾವಲು, ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆ ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ಸಂಪೂರ್ಣ ನಿಷೇಧವನ್ನು ಜಾರಿಗೆ ತರಲಾಗಿದೆ. ಪರೀಕ್ಷಾ ಅವಧಿಯಲ್ಲಿ ಯಾವುದೇ ಅಕ್ರಮ ಅಥವಾ ಗೊಂದಲ ಉಂಟಾಗದಂತೆ ವಿಶೇಷ ನಿಗಾವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ.
ಈ ವರ್ಷ ರಾಜ್ಯಾದ್ಯಂತ 8.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಆತಂಕಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಶಿಕ್ಷಣ ಇಲಾಖೆ ಸಲಹೆ ನೀಡಿದ್ದು, ವಿದ್ಯಾರ್ಥಿಗಳ ಯಶಸ್ಸಿಗೆ ಪೋಷಕರ ಸಹಕಾರವೂ ಅತ್ಯಂತ ಅಗತ್ಯವೆಂದು ಇಲಾಖೆ ಮನವಿ ಮಾಡಿದೆ.

