ಬೆಂಗಳೂರು: ನಗರದಲ್ಲಿ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಆ್ಯಪ್ ಆಧಾರಿತ ಆಟೋಗಳಾಗಲಿ ಅಥವಾ ಇನ್ನಾವುದೇ ಮಾದರಿಯ ಆಟೋಗಳಾಗಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು.
ಪ್ರಯಾಣಿಕರಿಂದ ನಿಗದಿಕ್ಕಿಂತ ದರಕ್ಕಿಂತ ಹೆಚ್ಚಿನ ದರ ಬೇಡಿಕೆ, ಹೆಚ್ಚಿನ ದರ ನೀಡದಿದ್ದಲ್ಲಿ ಪ್ರಯಾಣವನ್ನು ರದ್ದುಗೊಳಿಸುವುದು ಹಾಗೂ ಅತಿ ಹೆಚ್ಚಿನ ದರ ವಸೂಲು ಮಾಡುತ್ತಿರುವ ಪ್ರಕರಣಗಳ ಬಗ್ಗೆ ದೂರು ಬಂದಲ್ಲಿ ತ್ವರಿತಗತಿಯಲ್ಲಿ ಕ್ರಮಕೈಗೊಂಡು ಅಂತಹ ಆಟೋಗಳ ಪರ್ಮಿಟ್ ರದ್ದು ಮಾಡುವುದರ ಜತೆಗೆ ಪ್ರಕರಣ ದಾಖಲಿಸಬೇಕು ಅಧಿಕಾರಿಗಳಿಗೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಆಟೋ ಚಾಲಕರು ಹೆಚ್ಚು ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವರು ಕ್ರಮಕ್ಕೆ ಸೂಚಿಸಿದ್ದಾರೆ. ಜೂನ್ 18 ರಂದು ರ‍್ಯಾಪಿಡೋ ಆಟೋ ಆ್ಯಪ್ ಪ್ರತಿ ಕಿ.ಮೀ 100.89 ರೂ., ಅದೇ ಆಟೋ ಓಲಾ ಆ್ಯಪ್ ಅವರು 4 ಕಿ.ಮೀ ದೂರದ ಪ್ರಯಾಣಕ್ಕೆ ರೂ. 184.19 ತೆಗೆದುಕೊಂಡಿದ್ದಾರೆ. ಈ ರೀತಿಯ ಹಗಲು ದರೋಡೆ ಅಕ್ಷಮ್ಯ. ಹೀಗಾಗಿ ಕಠಿಣ ಕ್ರಮ ಜರುಗಿಸಬೇಕು.
ಈಗಾಗಲೇ ಬಾಡಿಗೆಗೆ ನಿರಾಕರಣೆ, ಅಧಿಕ ಬಾಡಿಗೆಗೆ ಒತ್ತಾಯಿಸಿದ ಆಟೋ ಚಾಲಕರ ವಿರುದ್ಧ ಪ್ರಕರಣಗಳನ್ನು ಸಾರಿಗೆ ಇಲಾಖೆಯು ದಾಖಲಿಸುತ್ತಿದ್ದರೂ, ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿರುವ ದೂರುಗಳಿಗೆ ಸಂಬಂಧಪಟ್ಟಂತೆ ಕೂಡಲೇ ಪರಿಣಾಮಕಾರಿಯಾದ ಕಾರ್ಯ ಯೋಜನೆ ರೂಪಿಸಿ ತಪ್ಪಿತಸ್ಥ ಆಟೋ ಚಾಲಕರ, ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚಿಸಿದೆ.

