ಬೆಳಗಾವಿ : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿದ್ದ ಗೊಂದಲಗಳಿಗೆ ಹೈಕಮಾಂಡ್ ನಾಯಕರು ತೆರೆ ಎಳೆದಿದ್ದು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಗರ ಆಧಾರ ರಹಿತ ಮಾತುಗಳನ್ನ ನಂಬಬೇಡಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ. ಅಧ್ಯಕ್ಷರು ಬದಲಾಗೋದಾದರೆ. ಡಿಕೆ ಶಿವಕುಮಾರ್ ಏಕೆ ಬೆಳಗಾವಿಗೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.
ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ನಿಂದ ನೋಟಿಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೂ ಈ ವದಂತಿಗಳನ್ನೆಲ್ಲ ಹಬ್ಬಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಅಲ್ಲದೆ ಬಿಜೆಪಿ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದರು.
ಬೆಳಗಾವಿಯಲ್ಲಿ ಈಗ ಮತ್ತೊಮ್ಮೆ ಜನವರಿ 21ರಂದು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿ ದೇಶದ ಎಲ್ಲ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕೈ ಪಾಳಯದ ಸಮರ ಜೋರಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಕೆಪಿಸಿಸಿ ಬದಲಾವಣೆ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಈಗಾಗಲೇ ಕೆಲ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಒಳ ಬೇಗೂದಿಗೆ ಹೈಕಮಾಂಡ್ ಇದೀಗ ಮದ್ದು ಅರಿಯುತ್ತಿದ್ದು, ಪವರ್ ಶೇರಿಂಗ್ ಕದನದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ಆಗಿದೆ. ಈಗಾಗಲೇ ರಣದೀಪ್ ಸಿಂಗ್ ಸುರ್ಜೆವಾಲಾ ಬೆಳಗಾವಿಗೆ ಆಗಮಿಸಿದ್ದಾರೆ. ಈ ವೇಳೆ ಸತೀಶ್ ಜಾರಕಿಹೊಳಿ ಸುರ್ಜೆವಾಲಾ ಅವರನ್ನು ಭೇಟಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಸಚಿವರು ಹಾಗೂ ಶಾಸಕರು ಪಕ್ಷದ ಆಂತರಿಕ ವಿಚಾರಗಳನ್ನ ಹಾಗೂ ನಾಯಕತ್ವ ಬದಲಾವಣೆಯ ತೀರ್ಮಾನವನ್ನು ತೆಗೆದುಕೊಳ್ಳುವುದು ಮಾಧ್ಯಮಗಳಲ್ಲ. ನಮ್ಮ ಪಕ್ಷದ ಹೈಕಮಾಂಡ್ ಆಗಿದೆ. ಹೀಗಾಗಿ ಪಕ್ಷದ ನಾಯಕರು ಯಾವುದೇ ವಿಷಯಗಳು ಇದ್ದರೂ ಮೊದಲಿಗೆ ಹೈಕಮಾಂಡ್ ನಾಯಕರ ಗಮನಕ್ಕೆ ತರಬೇಕೇ ವಿನಃ ಮಾಧ್ಯಮಗಳ ಮುಂದಲ್ಲ. ಇಂಥ ಹೇಳಿಕೆ ನೀಡಿರುವವರ ವರದಿಯನ್ನು ಹೈಕಮಾಂಡ್ ನಾಯಕರು ಕೇಳಿದ್ದಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಖಡಕ್ ಎಚ್ಚರಿಕೆಯನ್ನ ನೀಡಿದೆ.