ಬೆಂಗಳೂರು: ಇಂದಿನಿಂದ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠಕ್ಕೆ ತೊಂದರೆಯಾಗಿದೆ.ರಾಜ್ಯದ ಮೂಲೆ ಮೂಲೆಗಳಿಂದ ಪಾಠ ನಿಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಿದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಹಿಂದಿನಂತೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು. 2016ರ ಮೊದಲು ನೇಮಕವಾದ ಶಿಕ್ಷಕರಿಗೆ 2017ರ ಹೊಸ ವೃಂದ ಮತ್ತು ನೇಮಕಾತಿಗಳನ್ನು ಅನ್ವಯಿಸದೆ ಒಂದರಿಂದ ಎಂಟನೇ ತರಗತಿವರೆಗೆ ಬೋಧನೆಗೆ ಅವಕಾಶ ನೀಡಬೇಕು. ಪದವಿ ಪೂರ್ಣಗೊಳಿಸಿದ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪ್ರೌಢಶಾಲಾ ಶಿಕ್ಷಕರಾಗಿ ಭರ್ತಿಗೆ ಅವಕಾಶ ಕಲ್ಪಿಸಬೇಕು ಎಂಬ ಮೊದಲಾದ ಬೇಡಿಕೆಗಳನ್ನು ಶಿಕ್ಷಕರು ಹೊಂದಿದ್ದಾರೆ.
ಶಾಲೆಗಳನ್ನು ಮುಚ್ಚಿ ಮುಷ್ಕರಕ್ಕೆ ಅವಕಾಶವಿಲ್ಲ :
“ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ನಡತೆ) ನಿಯಮಗಳು-2021ರ ಪ್ರಕಾರ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವುದು ನಡತೆ ನಿಯಮಗಳ ಉಲ್ಲಂಘನೆಯಾಗುವುದರಿಂದ ದಿನಾಂಕ 12/08/2024ರಂದು ಶಾಲೆಗಳನ್ನು ಮುಚ್ಚಿ ಮುಷ್ಕರದಲ್ಲಿ ಭಾಗವಹಿಸಲು ಹಾಗೂ ಪಾಠ ಬೋಧನೆಗೆ ಅಡಚಣೆ ಉಂಟುಮಾಡಲು ಅವಕಾಶವಿರುವುದಿಲ್ಲ” ಎಂದು ಶಿಕ್ಷಣ ಇಲಾಖೆ ಹೇಳಿದೆ.

