Telangana : ಇನ್‌ಸ್ಟಾಗ್ರಾಂ ಮೂಲಕ ಪರಿಚಯಗೊಂಡ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಯುವತಿಯೊಬ್ಬಳು, ತಮ್ಮಿಬ್ಬರ ವಿವಾಹಕ್ಕೆ ಪೋಷಕರು ಒಪ್ಪದ ಕಾರಣ ಹೆತ್ತವರನ್ನೇ ವಿಷಕಾರಿ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಭೀಕರ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಯಾಚಾರಂನಲ್ಲಿ ನಡೆದಿದೆ.
ಆರೋಪಿತೆಯನ್ನು ಸುರೇಖಾ ಎಂದು ಗುರುತಿಸಲಾಗಿದ್ದು, ಸಂಗಾರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಕೆಲ ವರ್ಷಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಯುವಕನೊಬ್ಬನ ಪರಿಚಯವಾಗಿ ಸ್ನೇಹ ಬೆಳೆದು, ನಂತರ ಅದು ಪ್ರೇಮ ಸಂಬಂಧವಾಗಿ ಮಾರ್ಪಟ್ಟಿತ್ತು.
ಯುವಕ ಬೇರೆ ಜಾತಿಗೆ ಸೇರಿದವನಾಗಿದ್ದರಿಂದ ಸುರೇಖಾಳ ಮದುವೆಗೆ ಪೋಷಕರಾದ ದಶರಥ ಮತ್ತು ಲಕ್ಷ್ಮೀ ಒಪ್ಪಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ಜಗಳಗಳು ನಡೆದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರು ಮದುವೆಗೆ ಒಪ್ಪದೇ ಇರುವುದರಿಂದ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಸುರೇಖಾ ಆಸ್ಪತ್ರೆಯಿಂದ ಔಷಧೀಯ ಇಂಜೆಕ್ಷನ್‌ಗಳನ್ನು ಕದ್ದುಕೊಂಡು ಬಂದಿದ್ದಾಳೆ. ಜನವರಿ 24ರ ರಾತ್ರಿ ತಂದೆ–ತಾಯಿಗೆ ಅತಿಯಾದ ಪ್ರಮಾಣದಲ್ಲಿ ಇಂಜೆಕ್ಷನ್ ನೀಡಿ ಹತ್ಯೆ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಂತರ ಈ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದು, ತನ್ನ ಸಹೋದರನಿಗೂ ಸುಳ್ಳು ಮಾಹಿತಿ ನೀಡಿದ್ದಾಳೆ. ಆದರೆ ಆರೋಪಿ ಹೇಳಿಕೆಯಲ್ಲಿ ಅಸಂಗತತೆ ಕಂಡುಬಂದ ಹಿನ್ನೆಲೆ ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ ಖಾಲಿ ಇಂಜೆಕ್ಷನ್ ಬಾಟಲಿ ಹಾಗೂ ಸಿರಿಂಜ್‌ಗಳು ಪತ್ತೆಯಾಗಿವೆ. ಇದರಿಂದ ಇದು ಕೊಲೆ ಪ್ರಕರಣ ಎಂಬುದು ದೃಢಪಟ್ಟಿದೆ.
ಪೊಲೀಸ್ ವಿಚಾರಣೆಯಲ್ಲಿ ಸುರೇಖಾ, ಪ್ರೇಮ ವಿವಾಹಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಿಮಾಂಡ್‌ಗೆ ಕಳುಹಿಸಲಾಗಿದೆ.

