ಬೆಂಗಳೂರು, ಜ.5: ‘ತಿಥಿ’ ಚಿತ್ರದಲ್ಲಿ ತಮ್ಮ ವಿಶಿಷ್ಟ ಅಭಿನಯ ಹಾಗೂ ಸಂಭಾಷಣೆಗಳ ಮೂಲಕ ಕರುನಾಡಿನ ಗಮನ ಸೆಳೆದಿದ್ದ ಹಿರಿಯ ನಟ ಸೆಂಚುರಿಗೌಡ (ಸಿಂಗ್ರಿಗೌಡ) ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದರು. ಇಂದು ಪಾಂಡವಪುರ ತಾಲ್ಲೂಕಿನ ಸಿಂಗ್ರಿಗೌಡನಕೊಪ್ಪಲಿನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ಈಗಾಗಲೇ ‘ತಿಥಿ’ ಚಿತ್ರದಲ್ಲಿ ನಟಿಸಿದ್ದ ಮತ್ತೊಬ್ಬ ಹಿರಿಯ ಕಲಾವಿದ ಜೀವ ಗಡ್ಡಪ್ಪ (ಚನ್ನೇಗೌಡ) ಅವರು ನವೆಂಬರ್ 12ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಇದೀಗ ಸೆಂಚುರಿಗೌಡ ಅವರ ನಿಧನದೊಂದಿಗೆ ‘ತಿಥಿ’ ಸಿನಿಮಾದ ಇಬ್ಬರು ಹಿರಿಯ ನಟರನ್ನು ಚಿತ್ರರಂಗ ಕಳೆದುಕೊಂಡಂತಾಗಿದೆ.
ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’ ಸಿನಿಮಾದಲ್ಲಿ ತಂದೆ–ಮಗನ ಪಾತ್ರಗಳಲ್ಲಿ ಸೆಂಚುರಿಗೌಡ (ಸಿಂಗ್ರಿಗೌಡ) ಹಾಗೂ ಗಡ್ಡಪ್ಪ (ಚನ್ನೇಗೌಡ) ಅವರ ಅಭಿನಯಕ್ಕೆ ಬಾಲಿವುಡ್‌ನ ಖ್ಯಾತ ನಟರಾದ ಅಮೀರ್ ಖಾನ್, ಅನುರಾಗ್ ಕಶ್ಯಪ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಚಿತ್ರ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನೂ ನಿರ್ಮಿಸಿತ್ತು.
‘ತಿಥಿ’ ನಂತರ ಗಡ್ಡಪ್ಪ–ಸೆಂಚುರಿಗೌಡ ಜೋಡಿ ‘ಹಾಲುತುಪ್ಪ’, ‘ಚಿನ್ನದ ಗೊಂಬೆ’, ‘ಹಳ್ಳಿ ಪಂಚಾಯಿತಿ’, ‘ತರ್ಲೆ ವಿಲೇಜ್’, ‘ಗಡ್ಡಪ್ಪ ಸರ್ಕಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನರಂಜನೆಗೆ ಕಾರಣವಾಗಿತ್ತು.

