ನವದೆಹಲಿ, ಜನವರಿ 04: ಲ ಸಮೃದ್ಧ ವೆನೆಜುವೆಲಾದಲ್ಲಿ ಉಂಟಾಗಿರುವ ಗಂಭೀರ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತವು ತನ್ನ ಪ್ರಜೆಗಳಿಗೆ ಆ ದೇಶಕ್ಕೆ ಅನಗತ್ಯ ಪ್ರಯಾಣ ಮಾಡದಂತೆ ಶನಿವಾರ ರಾತ್ರಿ ಸಲಹೆ ನೀಡಿದೆ.
ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ದಾಳಿ ನಡೆಸಿ, ಅಧ್ಯಕ್ಷ ನಿಕೋಲಸ್ ಮಡುರೋ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಬೆಳವಣಿಗೆಯ ನಂತರ ದಕ್ಷಿಣ ಅಮೆರಿಕಾದ ಈ ರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ತೀವ್ರಗೊಂಡಿದೆ.
ಈ ಹಿನ್ನೆಲೆಯಲ್ಲಿ ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಜಾಗರೂಕತೆ ವಹಿಸಬೇಕು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅನಗತ್ಯವಾಗಿ ಹೊರಗಡೆ ಸಂಚರಿಸದಂತೆ, ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಅಮೆರಿಕದ ಕ್ರಮವನ್ನು ರಷ್ಯಾ, ಚೀನಾ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ತೀವ್ರವಾಗಿ ಟೀಕಿಸಿವೆ. ವೆನೆಜುವೆಲಾದಲ್ಲಿ ಪರಿಸ್ಥಿತಿ ಮತ್ತಷ್ಟು ಅಸ್ಥಿರಗೊಳ್ಳುವ ಸಾಧ್ಯತೆ ಇರುವುದರಿಂದ, ಭಾರತೀಯ ಪ್ರಜೆಗಳು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವೆಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
ಇದಲ್ಲದೆ, ವೆನೆಜುವೆಲಾದಲ್ಲಿರುವ ಭಾರತೀಯರು ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.

