ವಾಷಿಂಗ್ಟನ್, ಏಪ್ರಿಲ್ 12: ಜಾಗತಿಕ ರಾಜಕೀಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಅಮೆರಿಕ, ಇರಾನ್ ಮತ್ತು ಚೀನಾ ನಡುವಿನ ಸಂಘರ್ಷ ಗಂಭೀರ ತಿರುವು ಪಡೆದುಕೊಂಡಿದೆ. ಇರಾನ್‌ಗೆ ಚೀನಾ ನೀಡುತ್ತಿರುವ ಬೆಂಬಲದ ಹಿನ್ನೆಲೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿಸಿದೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ನೇರ ಸಂದೇಶ ರವಾನಿಸಿರುವ ಟ್ರಂಪ್, “ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಬೇಡಿ. ಇಲ್ಲವಾದರೆ ಊಹಿಸಲಾರದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವೇ ಮೇಲುಗೈ ಸಾಧಿಸಲಿದೆ ಎಂದು ಅವರು ಘೋಷಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನೆಲಬಾಂಬ್‌ಗಳನ್ನು ಅಳವಡಿಸುವ ಮೂಲಕ ಜಾಗತಿಕ ತೈಲ ಸಾಗಣೆಗೆ ಅಡ್ಡಿಪಡಿಸಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕ್ರಮವನ್ನು ತಡೆಯಲು ಅಮೆರಿಕ ತೀರ್ಮಾನಿಸಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ಅಮೆರಿಕದ ಯುದ್ಧ ವಿಮಾನಗಳ ಚಲನೆ ಕುರಿತು ಗುಪ್ತ ಮಾಹಿತಿಯನ್ನು ಚೀನಾ ಇರಾನ್‌ಗೆ ಒದಗಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರ ಪರಿಣಾಮವಾಗಿ, ಇರಾನ್ ಅಮೆರಿಕದ ಯುದ್ಧ ವಿಮಾನಗಳ ಮೇಲೆ ದಾಳಿ ನಡೆಸಲು ಸಾಧ್ಯವಾಗುತ್ತಿದೆ ಎಂದು ಅಮೆರಿಕ ವಲಯಗಳು ಹೇಳಿವೆ.
ಮುಂದಿನ ವಾರ ಚೀನಾ ಇರಾನ್‌ಗೆ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪೂರೈಸುವ ಸಾಧ್ಯತೆ ಇದೆ. ಈಗಾಗಲೇ ಭುಜದ ಮೇಲೆ ಹೊತ್ತೊಯ್ಯುವ MANPADS ಕ್ಷಿಪಣಿಗಳ ನೆರವಿನಿಂದ ಇರಾನ್, ಅಮೆರಿಕದ ಎಫ್-15 ಇ ಯುದ್ಧ ವಿಮಾನ ಹಾಗೂ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಕಳೆದ ಎರಡು ದಶಕಗಳಲ್ಲಿ ಅಮೆರಿಕದ ಯುದ್ಧ ವಿಮಾನಗಳಿಗೆ ನೇರ ಸವಾಲು ಎತ್ತಲು ಯಾರಿಗೂ ಸಾಧ್ಯವಾಗಿರಲಿಲ್ಲ. ಆದರೆ ಚೀನಾದ ತಂತ್ರಜ್ಞಾನ ಬೆಂಬಲದಿಂದ ಇರಾನ್ ಇದೀಗ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದು ವಿಶ್ಲೇಷಣೆಗಳು ಸೂಚಿಸುತ್ತಿವೆ. ಮಾರ್ಚ್ 2026ರಲ್ಲಿ ಚೀನಾ, ರಾಕೆಟ್ ಇಂಧನಕ್ಕೆ ಬಳಸುವ ಸೋಡಿಯಂ ಪರ್ಕ್ಲೋರೇಟ್ ಅನ್ನು ಎರಡು ಹಡಗುಗಳ ಮೂಲಕ ಇರಾನ್‌ಗೆ ಕಳುಹಿಸಿರುವುದು ಪತ್ತೆಯಾಗಿದೆ.
ಈ ಬೆಳವಣಿಗೆಗಳ ನಡುವೆಯೇ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ವಿಫಲವಾದರೆ ಅದರ ಹೊಣೆಯನ್ನು ಇರಾನ್ ಮತ್ತು ಚೀನಾ ಹೊರುತ್ತವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಒಂದು ಕಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಯುದ್ಧ ಸನ್ನದ್ಧತೆ ಜೋರಾಗಿದೆ.
ಚೀನಾ ಮತ್ತು ಅಮೆರಿಕ ನಡುವಿನ ನೇರ ಮುಖಾಮುಖಿಯ ಭೀತಿ ಜಾಗತಿಕ ಶಾಂತಿಗೆ ದೊಡ್ಡ ಸವಾಲಾಗಿದ್ದು, ಇರಾನ್-ಅಮೆರಿಕ ಸಂಘರ್ಷ ಈಗ ಮಹಾಶಕ್ತಿಗಳ ನಡುವಿನ ತೀವ್ರ ಪೈಪೋಟಿಯಾಗಿ ಮಾರ್ಪಟ್ಟಿದೆ.

