ಮುಂಬಯಿ: ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್ ಶೆಫಾಲಿ ಜರಿವಾಲಾ ಅವರು ತಡರಾತ್ರಿ ಹೃದಯ ಸ್ತಂಭನದಿಂದ ನಿಧನ ಹೊಂದಿದ್ದಾರೆ. ಹಿಂದಿ ಬಿಗ್ ಬಾಸ್ 13ರ ಸ್ಪರ್ಧಿಯಾಗಿದ್ದರು. 42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶೆಫಾಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಶೆಫಾಲಿ ಕೊನೆಯುಸಿರೆಳೆದಿದ್ದರು. ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ಶೆಫಾಲಿ ವಿವಾಹವಾದರು. ಆ ಬಳಿಕ ಪತಿಯೊಂದಿಗೆ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.
2002ರಲ್ಲಿ ಕಾಂತ ಲಗಾ ಎನ್ನುವ ಹಾಡಿನ ಮೂಲಕ ಶೆಫಾಲಿ ಜರಿವಾಲಾ ಹೆಚ್ಚು ಪ್ರಖ್ಯಾತಿಯನ್ನು ಪಡೆದಿದ್ದರು. ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಪರಾಗ್ ತ್ಯಾಗಿ, ಶೆಫಾಲಿ ಜರಿವಾಲಾ ಟೆಲಿವಿಷನ್ ಹಾಗೂ ಸಿನಿಮಾ ಎರಡರಲ್ಲೂ ಕೆಲಸ ಮಾಡುತ್ತಿದ್ದರು.
ಕನ್ನಡದಲ್ಲೂ ನಟನೆ :
ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ಹುಡುಗರು ಚಿತ್ರದ ‘ನಾ ಬೋರ್ಡು ಇರದ ಬಸ್ಸನು’ಹಾಡಿಗೆ ಶೆಫಾಲಿ ಹೆಜ್ಜೆ ಹಾಕಿದ್ದರು.
ತನಿಖೆ ಆರಂಭಿಸಿದ ಪೊಲೀಸರು :
ಮುಂಬೈ ಪೊಲೀಸರು ತನಿಖೆಗಾಗಿ ತಡರಾತ್ರಿ ಅಂಧೇರಿಯಲ್ಲಿರುವ ಶೆಫಾಲಿ ನಿವಾಸವನ್ನು ತಲುಪಿದರು. ವಿಧಿವಿಜ್ಞಾನ ತಂಡವೂ ಸ್ಥಳದಲ್ಲಿತ್ತು. ಮನೆಯನ್ನು ಸಂಪೂರ್ಣವಾಗಿ ಶೋಧಿಸಿತು. ಅವರ ಸಾವಿನ ಸಂದರ್ಭಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲವಾದರೂ, ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳ ಉಪಸ್ಥಿತಿಯು ಪ್ರಕರಣವನ್ನು ಅನುಮಾನಾಸ್ಪದವೆಂದು ಪರಿಗಣಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅಂಧೇರಿ ಪ್ರದೇಶದ ಅವರ ನಿವಾಸದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮುಂಬೈ ಪೊಲೀಸರಿಗೆ ಈ ಬಗ್ಗೆ ಬೆಳಗಿನ ಜಾವ ಗಂಟೆಗೆ ಮಾಹಿತಿ ಸಿಕ್ಕಿತು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂರ್ಪ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಶೆಫಾಲಿ :
ನಟಿ ಶೆಫಾಲಿ ಜರಿವಾಲಾ ಅವರ ಪತಿ ಪರಾಗ್ ತ್ಯಾಗಿ, ಇವರಿಬ್ಬರು 4 ವರ್ಷಗಳ ಕಾಲ ಪ್ರೀತಿಸಿ, ಆಗಸ್ಟ್ 2014ರಲ್ಲಿ ಇವರಿಬ್ಬರು ವಿವಾಹವಾದರು. ಈ ದಂಪತಿ ಹಲವಾರು ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪರಾಗಿ ತ್ಯಾಗಿ ಅವರು ಮೂಲತಃ ಉತ್ತರ ಪ್ರದೇಶದವರಾಗಿದ್ದು, ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿದೆ. ಇದೀಗ ಪತ್ನಿ ಶೆಫಾಲಿ ಜರಿವಾಲಾ ಅವರ ಅಕಾಲಿಕ ನಿಧನ ಪರಾಗ್ ತ್ಯಾಗಿಗೆ ನುಂಗರಾದ ತುತ್ತಾಗಿದೆ.
ಶೆಫಾಲಿ ಅವರು ಅನೇಕ ಮ್ಯೂಸಿಕ್ ಅಲ್ಬಮ್ ಗಳು ಮತ್ತು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕಾಂತಾ ಲಗಾ ರೀಮಿಕ್ಸ್ ವಿಡಿಯೋ ಮೂಲಕ ಅವರು ಹೆಚ್ಚು ಪ್ರಸಿದ್ಧರಾಗಿದ್ದರು. ಆ ನಂತರ ಸಲ್ಮಾನ್ ಖಾನ್ ನಟನೆಯ ಮುಚ್ಚಿ ಶಾದಿ ಕರೋಗಿ ಚಿತ್ರದಲ್ಲಿ ಅವರು ಕಾಣಿಸಿಕೊಂಡರು. ಶೆಫಾಲಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ನಾಚ್ ಬಲಿಯೇ ಕಾರ್ಯಕ್ರಮದಲ್ಲಿ ಪತಿ ಪರಾಗ್ ಅವರೊಂದಿಗೆ ಮತ್ತು ಬಿಗ್ ಬಾಸ್ 13ರಲ್ಲಿ ಭಾಗವಿಸುವ ಮೂಲಕ ಜನಪ್ರಿಯತೆ ಗಳಿಸಿದರು.

