ಢಾಕಾ, ಜ.5: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರ ಮುಂದುವರಿದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರು ಹಿಂದೂ ವ್ಯಕ್ತಿಗಳನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಈ ಘಟನೆಗಳು ದೇಶಾದ್ಯಂತ ಆತಂಕಕ್ಕೆ ಕಾರಣವಾಗಿವೆ.
ನರಸಿಂಗ್ಡಿ ಜಿಲ್ಲೆಯಲ್ಲಿ ದಿನಸಿ ಅಂಗಡಿಯ ಮಾಲೀಕರಾಗಿದ್ದ ಮೋನಿ ಚಕ್ರವರ್ತಿ ಎಂಬವರನ್ನು ಸೋಮವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮೋನಿ ಚಕ್ರವರ್ತಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಕೆಲವೇ ಗಂಟೆಗಳ ಮೊದಲು, ಜಶೋರ್ ಜಿಲ್ಲೆಯ ಕೇಶಬ್‌ಪುರ ಉಪವಿಭಾಗದಲ್ಲಿ ಮತ್ತೊಂದು ಹತ್ಯೆ ನಡೆದಿತ್ತು. ಕಾರ್ಖಾನೆ ಮಾಲೀಕರಾಗಿದ್ದು, ಪತ್ರಿಕೆಯೊಂದರ ಹಂಗಾಮಿ ಸಂಪಾದಕರಾಗಿದ್ದ ರಾಣಾ ಪ್ರತಾಪ್ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಂದಿದ್ದಾರೆ. ನೆರೆಯ ಕೇಶಬ್‌ಪುರ ಉಪ ಜಿಲ್ಲೆಯ ಶಾಲಾ ಶಿಕ್ಷಕನ ಪುತ್ರನಾದ ಪ್ರತಾಪ್, ಕಳೆದ ಎರಡು ವರ್ಷಗಳಿಂದ ಕೊಪಾಲಿಯಾ ಬಜಾರ್‌ನಲ್ಲಿ ಐಸ್ ಕಾರ್ಖಾನೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಸೋಮವಾರ ಸಂಜೆ ಕೆಲವರು ರಾಣಾ ಪ್ರತಾಪ್ ಅವರನ್ನು ಐಸ್ ಕಾರ್ಖಾನೆಯಿಂದ ಹೊರಗೆ ಕರೆದುಕೊಂಡು ಹೋಗಿ ಗುಂಡು ಹಾರಿಸಿದ್ದಾರೆ. ಘಟನಾ ಸ್ಥಳದಲ್ಲಿ ಪ್ರತಾಪ್ ದೇಹದ ಪಕ್ಕದಲ್ಲಿ ಏಳು ಗುಂಡುಗಳು ಪತ್ತೆಯಾಗಿದ್ದು, ಅವರ ತಲೆಗೆ ಮೂರು ಬಾರಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿವಿಧ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಕುರಿತು ಗಂಭೀರ ಚರ್ಚೆ ಆರಂಭವಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

