ಕಜಾನ್ : ರಷ್ಯಾದಲ್ಲಿ ಬೃಹತ್ ಕಟ್ಟಡಗಳ ಮೇಲೆ ಡ್ರೋನ್ ಉಕ್ರೇನ್ 9/11 ಮಾದರಿಯಲ್ಲಿ ಡ್ರೋನ್ ದಾಳಿ ನಡೆಸಿದೆ. ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋಣ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆ ಬೆಚ್ಚಿ ಬಿದ್ದಿದ್ದಾರೆ. ಉಕ್ರೇನ್‌ನ 8 ಸ್ಫೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿರುವುದಾಗಿ ವರದಿಗಳು ತಿಳಿಸಿವೆ. ಡ್ರೋನ್ ದಾಳಿಯ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಸರ್ಕಾರ ಆರೋಪಿಸಿದೆ. ದಾಳಿಯ ನಂತರ, ಕಜಾನ್‌ನಲ್ಲಿ ಅಧಿಕಾರಿಗಳು ತುರ್ತು ಪ್ರತಿಕ್ರಿಯೆ ಪ್ರಯತ್ನಗಳನ್ನು ಪ್ರಾರಂಭಿಸಿದರು ಮತ್ತು ನಿವಾಸಿಗಳನ್ನು ಕಟ್ಟಡಗಳಿಂದ ಸ್ಥಳಾಂತರಿಸಲಾಯಿತು ಎಂದು ವರದಿ ತಿಳಿಸಿದೆ.
ಎಪಿಎ ವರದಿಯ ಪ್ರಕಾರ, ಕಮಾಲೀವ್ ಅವೆನ್ಯೂ, ಕ್ಲಾರಾ ಜೆಟ್ಕಿನ್ ಸ್ಟ್ರೀಟ್, ಯುಕೋಜಿನ್ಸ್ಕಾಯಾ ಸ್ಟ್ರೀಟ್, ಹಾಡಿ ತಕ್ತಾಶ್ ಸ್ಟ್ರೀಟ್, ಕ್ರಾಸ್ನಾಯಾ ಪೊಜಿಸಿಯಾ ಸ್ಟ್ರೀಟ್ ಮತ್ತು ಓರೆನ್ಬರ್ಗ್ಸ್ಕಿ ಟ್ರಾಕ್ಟ್ ಸ್ಟ್ರೀಟ್ನಲ್ಲಿನ ಕಟ್ಟಡಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ.
ಈ ನಡುವೆ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿವೆ. ವೈರಲ್ ಆಗಿರುವ ವಿಡಿಯೋ ಸೆಪ್ಟೆಂಬರ್ 11, 2001ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿದ ಘಟನೆಯನ್ನು ಸ್ಮರಿಸುವಂತಿದೆ.
ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ ಎಂದು ತಿಳಿದುಬಂದಿದೆ.
ದಾಳಿಯ ನಂತರ ಕಜನ್ ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಮತ್ತು ಇಝೆವ್ಸ್ಕ್ ವಿಮಾನ ನಿಲ್ದಾಣದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ರಷ್ಯಾದ ವಾಯುಯಾನ ವಾಚ್‌ಡಾಗ್ ರೊಸಾವಿಯಾಟ್ಸಿಯಾ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಕೈವ್ ಮತ್ತು ಉಕ್ರೇನ್‌ನ ಇತರ ನಗರಗಳ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಈ ಡ್ರೋನ್ ದಾಳಿ ನಡೆದಿದೆ. ಕೈವ್‌ನಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ವಸತಿ ಪ್ರದೇಶಗಳನ್ನು ಹೊಡೆದಿದ್ದರಿಂದ ರಷ್ಯಾ ಉಕ್ರೇನಿಯನ್ ನಗರಗಳ ಮೇಲೆ 60 ಡ್ರೋನ್‌ಗಳು ಮತ್ತು ಐದು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ದಾಳಿಯಲ್ಲಿ ಒಂದು ಸಾವು ವರದಿಯಾಗಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ.

