ಒಡಿಶಾ ; ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಒಡಿಶಾದ ರೂರ್ಕೆಲಾ ಉಕ್ಕು ಸ್ಥಾವರಕ್ಕೆ ಮಹತ್ವದ ಅಧಿಕೃತ ಭೇಟಿ ನೀಡಿದರು. ದೇಶದ ಉಕ್ಕು ಉತ್ಪಾದನಾ ವಲಯದಲ್ಲಿ ರೂರ್ಕೆಲಾ ಸ್ಟೀಲ್ಡ್ ಪ್ಲಾಂಟ್ (RSP) ಪ್ರಮುಖ ಪಾತ್ರವಹಿಸಿರುವ ಹಿನ್ನೆಲೆಯಲ್ಲಿ, ಈ ಭೇಟಿ ಕೈಗಾರಿಕಾ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.
ಭೇಟಿಯ ಸಂದರ್ಭದಲ್ಲಿ ಕಾರ್ಖಾನೆಯ ಪ್ರಭಾರಿ ನಿರ್ದೇಶಕ ಅಲೋಕ್ ವರ್ಮ ಅವರು ಸಚಿವರಿಗೆ ಸ್ಥಾವರದ ಒಟ್ಟಾರೆ ಕಾರ್ಯಾಚರಣೆಯ ಸ್ಥಿತಿ, ಉತ್ಪಾದನಾ ಸಾಮರ್ಥ್ಯ, ನಡೆಯುತ್ತಿರುವ ತಾಂತ್ರಿಕ ನವೀಕರಣಗಳು ಹಾಗೂ ಮುಂದಿನ ವರ್ಷಗಳಲ್ಲಿ ಜಾರಿಗೆ ಬರುವ ಕಾರ್ಯತಂತ್ರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ತಾಂತ್ರಿಕವಾಗಿ ಸ್ಥಾವರವನ್ನು ಇನ್ನಷ್ಟು ಬಲಪಡಿಸಲು ಕೈಗೊಳ್ಳಲಾಗುತ್ತಿರುವ ಆಧುನೀಕರಣ ಕ್ರಮಗಳ ಕುರಿತು ಪ್ರಸ್ತುತಪಡಿಸಿದ ವರದಿ ಸಚಿವರಿಂದ ಮೆಚ್ಚುಗೆ ಪಡೆದಿತು.
ಉಕ್ಕು ಉತ್ಪಾದನೆಯ ಗುಣಮಟ್ಟ, ಉತ್ಪಾದನಾ ವೆಚ್ಚದ ಇಳಿಕೆ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉಕ್ಕಿನ ಸ್ಪರ್ಧಾತ್ಮಕತೆ ಹೆಚ್ಚಿಸುವ ದಿಶೆಯಲ್ಲಿ ರೂರ್ಕೆಲಾ ಘಟಕದಲ್ಲಿ ಕೈಗೊಳ್ಳಲಾಗುತ್ತಿರುವ ಸುಧಾರಣೆಗಳನ್ನೂ ಸಚಿವರು ಪರಿಶೀಲಿಸಿದರು. ಸ್ಥಾವರದ ಮೂಲಸೌಕರ್ಯ, ಮಾನವ ಸಂಪನ್ಮೂಲ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಮತ್ತು ಪರಿಸರ ಸಂರಕ್ಷಣಾ ಮಾನದಂಡಗಳ ಅನುಷ್ಠಾನಕ್ಕೂ ಸಚಿವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಭಾರತ ಸರ್ಕಾರದ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ಭಾರತೀಯ ಉಕ್ಕು ಪ್ರಾಧಿಕಾರ (SAIL)ದ ಹಿರಿಯ ಅಧಿಕಾರಿಗಳು ಸಚಿವರೊಂದಿಗೆ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸರ್ಕಾರದ ಕೈಗಾರಿಕಾ ವೃದ್ಧಿ ದೃಷ್ಟಿಯಲ್ಲಿ ರೂರ್ಕೆಲಾ ಉಕ್ಕು ಸ್ಥಾವರದ ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆದಿರುವುದು ತಿಳಿದು ಬಂದಿದೆ.
ಸಚಿವರ ಈ ಭೇಟಿ ದೇಶದ ಉಕ್ಕು ಕ್ಷೇತ್ರದ ಬಲವರ್ಧನೆ ಹಾಗೂ ಕೈಗಾರಿಕಾ ಸುಧಾರಣಾ ಯೋಜನೆಗಳಿಗೆ ಮತ್ತೊಂದು ಹೊಸ ವೇಗ ನೀಡಲಿದೆ ಎಂದು ವಲಯದ ಪರಿಣಿತರ ಆಶಾವಾದ.

