ನವದೆಹಲಿ : ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ಸೋವಿಯತ್ ರಷ್ಯಾ ವಿಜಯ ಸಾಧಿಸಿದ 80ನೇ ವರ್ಷಾಚರಣೆಯನ್ನು ಗುರುತಿಸುವ ಮೇ 9ರ ವಿಜಯ ದಿನದ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾ ಆಹ್ವಾನಿಸಿದೆ.
ಪ್ರಧಾನಿ ಮೋದಿಯವರ 2024ರ ಜುಲೈನಲ್ಲಿ ರಷ್ಯಾಗೆ ಭೇಟಿ ನೀಡಿದ್ದರು. ಇದು ಸುಮಾರು 5 ವರ್ಷಗಳಲ್ಲಿ ಅವರ ಮೊದಲ ವಿದೇಶ ಪ್ರವಾಸವಾಗಿತ್ತು. ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ 2019ರಲ್ಲಿ ದೂರದ ಪೂರ್ವ ನಗರವಾದ ವ್ಲಾಡಿವೋಸ್ಟಾಕ್ಗೆ ಭೇಟಿ ನೀಡಿದ್ದರು. ಅವರ ಕೊನೆಯ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭಾರತಕ್ಕೆ ಭೇಟಿ ನೀಡಲು ಆಹ್ವಾನವನ್ನು ನೀಡಿದ್ದರು. ಅದಕ್ಕೆ ರಷ್ಯಾ ಅಧ್ಯಕ್ಷ ಒಪ್ಪಿಕೊಂಡಿದ್ದರು. ಆದರೆ, ಪುಟಿನ್ ಅವರ ಭೇಟಿಯ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.
ಜನವರಿ 1945ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಸೋವಿಯತ್ ಸೈನ್ಯವು ಜರ್ಮನಿಯ ವಿರುದ್ಧ ದಾಳಿಯನ್ನು ಪ್ರಾರಂಭಿಸಿತು. ಅದು ರಷ್ಯಾ ಸೈನ್ಯದ ವಿಜಯದಲ್ಲಿ ಕೊನೆಗೊಂಡಿತು. ಇದರ ನಂತರ, ಮೇ 9ರಂದು ಕಮಾಂಡರ್-ಇನ್-ಚೀಫ್ ಜರ್ಮನಿಯ ಬೇಷರತ್ತಾದ ಶರಣಾಗತಿ ಕಾಯ್ದೆಗೆ ಸಹಿ ಹಾಕಿದರು, ಇದು ಯುದ್ಧವನ್ನು ಕೊನೆಗೊಳಿಸಿತು.