ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ ಹಾಗೂ ತಾಯಿ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಕೆಆರ್ ರಸ್ತೆಯ ಶ್ರೀ ಶಾರದಾ ದೇವಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಕುಟುಂಬ ಸಮೇತ ಬಂದು ಮತಹಾಕಿದ್ದಾರೆ. ಜೊತೆಗೆ ಮತದಾನದ ಅರಿವನ್ನೂ ಅವರು ಮೂಡಿಸಿದ್ದಾರೆ.

ಕುಟುಂಬದ ಜೊತೆ ಗಾಯತ್ರಿ ನಗರದ ಮತಗಟ್ಟೆಗೆ ಆಗಮಿಸಿ ರಾಧಿಕಾ ಪಂಡಿತ್ (Radika Pandit) ವೋಟ್ ಮಾಡಿದ್ದಾರೆ. ಈ ವೇಳೆ ನಟಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸೆಲೆಬ್ರಿಟಿಗಳು ಹೇಳ್ತಾರೆ ಅಂತ ವೋಟ್ ಮಾಡಬೇಡಿ. ಮತದಾನ ಮಾಡೋದು ನಮ್ಮೆಲ್ಲರ ಹಕ್ಕು ಎಂದಿದ್ದಾರೆ. ಎಲ್ಲರೂ ಬಂದು ಮತ ಚಲಾಯಿಸಿ ಇನ್ನೂ ಸಮಯ ಇದೆ ಬನ್ನಿ ಎಂದು ರಾಧಿಕಾ ಮಾತನಾಡಿದ್ದಾರೆ.

ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಏಟು ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್(Darshan) , ಇದೀಗ ಪತ್ನಿ ವಿಜಯಲಕ್ಷ್ಮಿ (Vijalakshmi) ಸಮೇತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಸರತಿಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ ದರ್ಶನ್ ಮತ್ತು ವಿಜಯಲಕ್ಷ್ಮಿ.

ಕನ್ನಡದ ಹೆಸರಾಂತ ನಟಿ ರಚಿತಾ ರಾಮ್ (Rachita Ram) ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರು. ಸಾಮಾನ್ಯರಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಅಭಿಮಾನಿಗಳು ರಚಿತಾ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಸಿದರು.

ಮತದಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ, ಮನೆಯಲ್ಲಿ ಕೂತು ಕಾಮೆಂಟ್ ಮಾಡೋದಕ್ಕಿಂದ ಬಂದು ವೋಟ್ ಮಾಡಿ. ವೋಟ್ ಮಾಡದೇ ಬ್ಲೇಮ್ ಮಾಡಬೇಡಿ, ನಮ್ಮ ನಾಯಕರ ಆಯ್ಕೆ ಮಾಡಲೇಬೇಕು. ಬಿಸಿಲು ಅಂತ ಮನೆಯಲ್ಲಿ ಕೂರಬೇಡಿ, ಸಂಜೆವರೆಗೂ ಟೈಂ ಇದೆ ಬಂದು ವೋಟ್ ಮಾಡಿ. ಹಿರಿಯನಾಗರೀಕರೆ ಉತ್ಸಾಹದಿಂದ ವೋಟ್ ಮಾಡುವಾಗ ಯುವಕರು ಯಾಕೆ ಮನೆಯಲ್ಲಿ ಕೂರಬೇಕು ಎಂದು ಅವರು ಪ್ರಶ್ನೆ ಮಾಡಿದರು.

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಒಬ್ಬರೇ ಬಂದು ರಾಜಾಜಿನಗರದ ಠಾಗೂರು ಸ್ಕೂಲ್ ನಲ್ಲಿ ಮತದಾನ ಮಾಡಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ರವಿಚಂದ್ರನ್, ನಂತರ ತಮ್ಮ ಹಕ್ಕನ್ನು ಚಲಾಯಿಸಿದ್ದರ ಬಗ್ಗೆ ಮಾತನಾಡಿದ್ದರು. ಇದು ನನ್ನ ಹಕ್ಕು, ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ಬಂದು ವೋಟು ಮಾಡಿ ಎಂದರು.


