ಕೇರಳ: ವಯನಾಡ್ನಲ್ಲಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 316ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಇನ್ನು ಭೂಕುಸಿತದಿಂದ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಅಲ್ಲದೇ ನೂರಾರು ಮಂದಿ ಗಾಯಗೊಂಡಿದ್ದು, ಪ್ರವಾಹದಲ್ಲಿ ಮೃತಪಟ್ಟ 100ಕ್ಕೂ ಹೆಚ್ಚು ಜನರ ಗುರುತು ಪತ್ತೆಯಾಗಿಲ್ಲ.
ಮಣ್ಣಿನಡಿ ಸಿಲುಕಿದವರ ರಕ್ಷಣೆಗೆ NDRF, SDRF ತಂಡ ಹರಸಾಹಸ ಪಡುತ್ತಿದೆ. ಈಗಾಗಲೇ 1,625 ಜನರ ರಕ್ಷಣೆ ಮಾಡಲಾಗಿದ್ದು 82 ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯ ಗುಡ್ಡ ಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುರೆದಿದೆ.
ಮರಳು ಕಲಾಕೃತಿ ರಚಿಸಿ ಶ್ರದ್ಧಾಂಜಲಿ ಸಲ್ಲಿಕೆ :
ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯ ಸಮುದ್ರ ತೀರದಲ್ಲಿ ಕಲಾಕೃತಿಯನ್ನು ರಚಿಸುವ ಮೂಲಕ ವಯನಾಡು ಭೂಕುಸಿತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದರ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
10 ಲಕ್ಷ ರೂ. ಕೊಟ್ಟ ರಶ್ಮಿಕಾ ಮಂದಣ್ಣ :
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ದೇವರ ಸ್ವಂತ ನಾಡಿನ ಜನರಿಗೆ ತಮ್ಮ ಕೈಲಾಗುವ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ವಯನಾಡಿನ ದುರಂತಕ್ಕೆ ಪರಿಹಾರವಾಗಿ ಕೇರಳ ಸಿಎಂ ಪರಿಹಾರ ನಿಧಿಗೆ ರೂ 10 ಲಕ್ಷ ರೂ ದೇಣಿಗೆ ನೀಡಿದ್ದಾರೆ.
ಇತ್ತೀಚೆಗೆಗಷ್ಟೆ ರಶ್ಮಿಕಾ ಮಂದಣ್ಣ ಅವರು ಕೇರಳಕ್ಕೆ ಭೇಟಿ ನೀಡಿ ಅಲ್ಲಿನ ಜನರ ಪ್ರೀತಿ ಮನ ಸೋತಿದ್ದರು. ಮೂಲತಾ ಕೊಡಗಿನವಳಾದ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿದ್ದು, ಕೇರಳದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಬೈಡನ್ ಸಂತಾಪ :
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಂತಾಪ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಶ್ಲಾಘಿಸಿರುವ ಅವರು ಕಷ್ಟದ ಸಮಯದಲ್ಲಿ ಭಾರತೀಯರ ಜೊತೆ ನಾವಿರುತ್ತೇವೆ ಎಂದಿದ್ದಾರೆ.
‘ಜಿಲ್ ಬೈಡನ್ ಮತ್ತು ನಾನು ಕೇರಳದಲ್ಲಿ ಸಂಭವಿಸಿದ ದುರಂತ ಘಟನೆಯಲ್ಲಿ (ಭೂಕುಸಿತ) ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ’ ಎಂದು ಜೋ ಬೈಡನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.