ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಸುಮಾರು 84 ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಜುಲೈ 30 ಮತ್ತು 31ರಂದು ಕೇರಳ ಸರ್ಕಾರ ಶೋಕಾಚರಣೆ ಘೋಷಿಸಿದೆ. ರಾಜ್ಯ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ ಭಾರಿ ಭೂಕುಸಿತ ಸಂಭವಿಸಿದ್ದು, ಕನಿಷ್ಠ 84 ಜನರು ಸಾವನ್ನಪ್ಪಿದ್ದಾರೆ, 116 ಜನರು ಗಾಯಗೊಂಡಿದ್ದಾರೆ ಮತ್ತು ನೂರಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ನಾಲ್ಕು ಗಂಟೆಗಳ ಅವಧಿಯಲ್ಲಿ ವಯನಾಡ್ನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ್ದರಿಂದ ಎನ್ಡಿಆರ್ಎಫ್ ಮತ್ತು ಸೇನೆ ಸೇರಿದಂತೆ ಅನೇಕ ಏಜೆನ್ಸಿಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಈ ಹಿನ್ನೆಲೆ ಕೇರಳದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೋ ಹೆಚ್ಚುತ್ತಲೇ ಇದೆ. 100ಕ್ಕೂ ಹೆಚ್ಚು ಮಂದಿ ಮಣ್ಣಿನಡಿಯಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ವರದಿಗಳ ಪ್ರಕಾರ ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕಯ್ಯಿಲ್ ಪಟ್ಟಣದಲ್ಲಿ ಭಾರಿ ಮಳೆ ಸುರಿದ ಪರಿಣಾಮ ತಡರಾತ್ರಿ 2 ಗಂಟೆ ಸುಮಾರಿಗೆ ಮೊದಲ ಭೂಕುಸಿತ ಸಂಭವಿಸಿದೆ.
ನಸುಕಿನ ಜಾವ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದರೆ ಮುಂಜಾನೆ 4.10ರ ವೇಳೆ ಎರಡನೇ ಬಾರಿ ಸಂಭವಿಸಿದೆ. ಜಲಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಮನೆಗಳ ಮೇಲೆ ಹರಿದು ಹೋಗಿದ್ದರಿಂದ ಸಾವು ನೋವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ.
ಮುಂಡಕ್ಕಯ್ಯಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, 19 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ವಯನಾಡು ಜಿಲ್ಲೆಯ ಅಧಿಕಾರಿಗಳ ಪ್ರಕಾರ ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತವೊಂದರಲ್ಲಿ ಸಾವನ್ನಪ್ಪಿದೆ. ಭಾರೀ ಭೂಕುಸಿತದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಭೂಕುಸಿತದಿಂದ ಅಟ್ಟಮಾಲ ಮತ್ತು ಮುಂಡಕ್ಕಯ್ಯಿಲ್ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಉಳಿದ ಭಾಗಗಳ ಸಂಪರ್ಕ ಕಡಿತಗೊಂಡಿವೆ. ಪಾಲಕ್ಕಾಡ್‌ನಲ್ಲಿ ಗುಡ್ಡಗಾಡು ಪ್ರದೇಶದ ಮೂರು ಸ್ಥಳಗಳಲ್ಲಿ ಮಂಗಳಂ ಅಣೆಕಟ್ಟು ಕುಸಿದಿದೆ.
2 ಲಕ್ಷ ರೂಪಾಯಿ ಪರಿಹಾರ :
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಮೋದಿ ಕಾರ್ಯಾಲಯ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ 50,000 ನೀಡಲಾಗುತ್ತದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಚರ್ಚಸಿ, ಸರ್ಕಾರಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ನೆರವು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಕೊಳ್ಳಲು ಸೂಚನೆ ನೀಡುವಂತೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಕೇಳಿದ್ದಾರೆ. ಈ ಸಂಬಂಧ ಕೇರಳದ ಬಿಜೆಪಿಯ ಏಕೈಕ ಸಂಸದ, ಕೇಂದ್ರ ಸಚಿವ ಸುರೇಶ್ ಗೋಪಿ ಅವರೊಂದಿಗೂ ಪ್ರಧಾನಿ ಮೋದಿ ಮಾತನಾಡಿದ್ದಾರೆಂದು ತಿಳಿದುಬಂದಿದೆ.
ವಯನಾಡಿನ ಕೆಲವು ಪ್ರದೇಶಗಳು ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಸಾಂತ್ವಾನ ಹೇಳುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ನಾನು ಸಂತಸ್ತರ ಕುಟುಂಬದ ಪರವಾಗಿ ನಿಲ್ಲುತ್ತೇನೆ. ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದೇನೆ. ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡುತ್ತೇವೆ ಎಂದು ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ತೀವ್ರ ದುಃಖ ವ್ಯಕ್ತಪಡಿಸಿದ ರಾಹುಲ್ ಗಾಂಧಿ :
ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡು ಸಂಸದ ರಾಹುಲ್ ಗಾಂಧಿ ಕೂಡ ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆ ತೀವ್ರವಾದ ನೋವನ್ನುಂಟುಮಾಡಿದೆ. ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇನೆ. ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವಾನ ಹೇಳುತ್ತೇನೆ. ಮಣ್ಣಿನಡಿ ಇನ್ನೂ ಸಿಕ್ಕಿಬಿದ್ದಿರುವವರನ್ನು ಶೀಘ್ರದಲ್ಲೇ ಸುರಕ್ಷಿತ ಸ್ಥಳಕ್ಕೆ ಕರೆತರಲಾಗುವುದು ಎಂದು ನಾನು ಭಾವಿಸುತ್ತೇನೆ. ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಅಂತ ಭರವಸೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

