ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಭಾರತಕ್ಕೆ ವಾಪಸ್ ಆಗಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಫೋಗಟ್‌ಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.
ಅಭಿಮಾನಿಗಳನ್ನು ನೋಡಿ ಫೋಗಟ್ ಭಾವೋದ್ವೇಗಕ್ಕೆ ಒಳಗಾದರು. ಫೋಗಟ್ ಕಣ್ಣಲ್ಲಿ ನೀರು ಉಕ್ಕಿತ್ತು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿದರು.
ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.
ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ ವಜಾಗೊಳಿಸಿಸಿತ್ತು.

