ಬೆಂಗಳೂರು : ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ ದೇಹದ ಭಾಗಗಳನ್ನು ರೆಫ್ರಿಜರೇಟರ್ ನಲ್ಲಿಟ್ಟ ಘಟನೆ ಬೆಂಗಳೂರಿನಲ್ಲಿ ಇಂದು ಬೆಳಕಿಗೆ ಬಂದಿದೆ. ವೈಯ್ಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೇಶ್ವರಂ ಪೈಲ್‌ಲೈನ್ ರಸ್ತೆ ಆಶ್ರಮ ಸಮೀಪ ಜಯರಾಮ್ ಎಂಬುವವರ ಮನೆಯಲ್ಲಿ ಈ ಭೀಕರ ಕೊಲೆ ನಡೆದಿದೆ.
ಸುಮಾರು 30 ವರ್ಷದ ಯುವತಿ ಇವರ ಮನೆಯ ಒಂದನೇ ಮಹಡಿಯಲ್ಲಿ ಬಾಡಿಗೆಗೆ ಇದ್ದರು. ಹಲವು ದಿನಗಳಿಂದ ಮನೆ ಬೀಗ ಹಾಕಿತ್ತು. ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿ ಅಕ್ಕ-ಪಕ್ಕದವರು ಅವರ ಸಂಬಂಧಿಕರಿಗೆ ತಿಳಿಸಿ, ಬಾಗಿಲು ತೆಗೆಸಿದಾಗಲೇ ಈ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಯುವತಿ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ವೈಯ್ಯಾಲಿಕಾವಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊಲೆಯಾಗಿರುವ ಯುವತಿಯ ಹೆಸರು ಮತ್ತು ವಿವರ ತಿಳಿದು ಬಂದಿದೆ. ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ತಿಳಿಸಿದರು.
ಕೊಲೆಯಾದ ಯುವತಿ ಯಾರು, ಕೊಲೆಯಾಗಿದ್ದು ಏಕೆ, ಇಷ್ಟೊಂದು ಬರ್ಬರವಾಗಿ ಕೊಲೆ ಮಾಡಲು ಕಾರಣವೇನು..? ಮಾಡಿದವರು ಯಾರು? ಎಂಬುದರ ಕುರಿತು ಪೊಲೀರು ತನಿಖೆ ಆರಂಭಿಸಿದ್ದಾರೆ.

