ಬೆಂಗಳೂರು, ಜ.13: ದಾಸರಹಳ್ಳಿಯ ಚೊಕ್ಕಸಂದ್ರದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಿಜುಧಾರ್ (34), ಅಂಜಲಿದಾಸ್ (31), ಮನುಶ್ರೀ (3), ಮನು(25), ತಿಪ್ಪೇರುದ್ರಸ್ವಾಮಿ (50), ಪಕ್ಕದ ಮನೆ ಶೋಭ (60) ಮತ್ತು ಕರೀಬುಲ್ಲ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ದಿಜುಧಾರ್ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡಿದೆ.
ಇಂದು ಬೆಳಗ್ಗೆ 8:25ಕ್ಕೆ ಈ ಅವಘಡ ಸಂಭವಿಸಿದ್ದು, ಒಂದು ಪುಟ್ಟ ಮಗು ಸೇರಿದಂತೆ ಒಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸ್ಫೋಟದಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದ ತೀವ್ರತೆಗೆ ಬಾಗಿಲು, ಕಿಟಕಿ ಚೂರಾಗಿದ್ದು, ಕಿಟಕಿಗೆ ಹಾಕಿದ್ದ ಬಟ್ಟೆ ಸುಟ್ಟು ಕರಕಲಾಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯುಂಟು ಮಾಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದ್ದು, ಸ್ಥಳೀಯ ಪಿಣ್ಯ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸಿಲಿಂಡರ್ ಸ್ಫೋಟ ಪ್ರಕರಣಗಳ ಹೆಚ್ಚಳ :
ದಿನೇದಿನೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮೊನ್ನೆಯಷ್ಟೇ ಅನೇಕಲ್ ತಾಲೂಕಿನ ಕಿತ್ತಾಗನಹಳ್ಳಿಯಲ್ಲಿ ಸಿಲಿಂಡರ್ ಸೋರಿಕೆಯಿಂದ ಸಂಭವಿಸಿದ ಸ್ಫೋಟದಲ್ಲಿ ಹಲವರು ಗಂಭೀರ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ವಿಷ್ಣು ಜಯರಾಜ್ ಎಂಬುವವರು ಓರ್ವ ಮೃತಪಟ್ಟಿದ್ದರು. ಆನೇಕಲ್ ಸಿಲಿಂಡರ್ ಸ್ಫೋಟದ ಬೆನ್ನಲ್ಲೇ ಇದೀಗ ಟಿ ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಮಗು ಸೇರಿ ಹಲವರು ಗಾಯಗೊಂಡಿದ್ದಾರೆ. ಇದರಿಂದಾಗಿ ಅಡುಗೆ ಮನೆಯಲ್ಲಿ ಸಿಲಿಂಡರ್ ಬಳಸಲು ಹೆದರುವಂತಾಗಿದೆ.

