ಬ್ಯಾಂಕಾಕ್: ಭೀಕರ ಭೂಕಂಪದಿಂದ ತತ್ತರಿಸಿದ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ಮ್ಯಾನ್ಮಾರ್ನಲ್ಲಿ 4.2 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಶುಕ್ರವಾರ ರಾತ್ರಿ 11.56ಕ್ಕೆ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ಹೊಂದಿದ್ದ ಮತ್ತೊಂದು ಭೂಕಂಪ ಸಂಭವಿಸಿದೆ.
ಥಾಯ್ಲೆಂಡ್ ಮತ್ತು ವಿಯೇಟ್ನಾಂ ಗಡಿಯ ಮಂಡಲೇ ಪ್ರದೇಶದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಈ ಕಂಪನ ಅನುಭವಕ್ಕೆ ಬಂದಿದೆ. ಬ್ಯಾಂಕಾಕ್ಕಲ್ಲೂ ಭೂಕಂಪ ಸಂಭವಿಸಿ, ಜನ ಭೀತರಾಗಿ ಕಟ್ಟಡಗಳಿಂದ ಹೊರಬಂದರು. ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 144 ದಾಟಿದ್ದು, ಸಾವಿನ ಸಂಖ್ಯೆ 1000 ಮೀರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ (900 ಕಿಲೋ ಮೀಟರ್ ದೂರದ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಂಕ್ ಮೇಲೂ ದೊಡ್ಡ ಪರಿಣಾಮ ಬೀರಿದೆ. 1930ರ ನಂತರ ಥಾಯ್ಲೆಂಡ್‌ನಲ್ಲಿ ಎದುರಿಸಿದ ಅತ್ಯಂತ ಶಕ್ತಿಶಾಲಿ ಕಂಪನ ಇದಾಗಿದ್ದು, ಗಗನಚುಂಬಿ ಕಟ್ಟಡಗಳ ಧರಾಶಾಹಿಯಾಗಿವೆ. ನಿಂತ ಸ್ಥಳದಲ್ಲಿ ಮೆಟ್ರೋ ರೈಲ್ವೆ ನಲುಗಿ ಹೋಗಿವೆ, ರಸ್ತೆಗಳು ಬಾಯಿತೆರದು ನಿಂತಿದೆ.
ಮ್ಯಾನ್ಮಾರ್‌ಗೆ ಸಹಾಯ ಹಸ್ತ ಚಾಚಿದ ಭಾರತ :

ಈ ನಡುವೆ ಮ್ಯಾನ್ಮಾರ್‌ಗೆ ಭಾರತ ನೆರವಿನ ಹಸ್ತ ಚಾಚಿದೆ. ತಾತ್ಕಾಲಿಕ ಟೆಂಟ್‌ಗಳು, ಮಲಗುವ ಹಾಸಿಗೆ, ಹೊದಿಕೆಗಳು, ಆಹಾರ, ನೀರು, ನೈರ್ಮಲ್ಯ ಕಿಟ್, ಸೋಲಾರ್ ಲೈಟ್, ಜನರೇಟರ್ ಸೆಟ್ ಹಾಗೂ ಔಷಧಗಳ ನೆರವನ್ನು ಭಾರತ ನೀಡಿದೆ. ಈಗಾಗಲೇ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯುಸೇನೆಯ C-130-J ವಿಮಾನ ವಿಮಾನದಲ್ಲಿ ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ.