ಇಸ್ಲಮಾಬಾದ್ : ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಕಳೆದ ವಾರ ಭಾರತದೊಂದಿಗೆ ನಡೆದ ಸಂಘರ್ಷದಲ್ಲಿ 11 ಸೈನಿಕರು ಮತ್ತು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಇಂದು ಒಪ್ಪಿಕೊಂಡಿದೆ.
ಇತ್ತೀಚಿನ ಭಾರತೀಯ ದಾಳಿಯಲ್ಲಿ 11 ಸೈನಿಕರು ಮತ್ತು 40 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಏಪ್ರಿಲ್ 22ರಿಂದ ಮೇ 10ರವರೆಗಿನ ಸಂಘರ್ಷವನ್ನು ಮಾರ್ಕಾ-ಎ-ಹಕ್ (ಸತ್ಯದ ಯುದ್ಧ) ಎಂದು ಪಾಕಿಸ್ತಾನ ಕರೆದಿದೆ.
4 ದಿನಗಳ ಕಾಲ ನಡೆದ ಈ ಘರ್ಷಣೆಯಲ್ಲಿ ಪಾಕಿಸ್ತಾನ ಸೇನೆ ಮತ್ತು ವಾಯುಪಡೆಯ 78 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಪಾಕಿಸ್ತಾನ ವಾಯುಪಡೆಯ ಬಲಿಪಶುಗಳಲ್ಲಿ ಸ್ಕ್ವಾಡ್ರನ್ ನಾಯಕ ಉಸ್ಮಾನ್ ಯೂಸುಫ್, ಮುಖ್ಯ ತಂತ್ರಜ್ಞ ಔರಂಗಜೇಬ್, ಹಿರಿಯ ತಂತ್ರಜ್ಞ ನಜೀಬ್, ಕಾರ್ಪೋರಲ್ ತಂತ್ರಜ್ಞ ಫಾರೂಕ್ ಮತ್ತು ಹಿರಿಯ ತಂತ್ರಜ್ಞ ಮುಬಾಶಿರ್ ಸೇರಿದ್ದಾರೆ ಎಂದು ಅದು ಹೇಳಿದೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಪ್ರಕಾರ, ಪಾಕ್ ಸೇನೆಯ 11 ಮಂದಿ ಸಾವನ್ನಪ್ಪಿದ್ದು, 6 ಮಂದಿ ಸೇನಾಪಡೆಯವರು ಮತ್ತು 5 ಮಂದಿ ಪಾಕಿಸ್ತಾನ ವಾಯುಪಡೆ (PAF) ಅಧಿಕಾರಿಗಳು.
ಭಾರತದ ‘ಆಪರೇಷನ್ ಸಿಂಧೂರ್’ ನಲ್ಲಿ ಪಾಕ್ ಸೇನೆಯ ಮುಖ್ಯ ತಂತ್ರಜ್ಞ ಔರಂಗಜೇಬ್ ಸೇರಿದಂತೆ ವಾಯುಪಡೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದಾಗಿ ಪಾಕಿಸ್ತಾನ ದೃಢಪಡಿಸಿದ್ದು ಇದೇ ಮೊದಲು.

