ಬೆಂಗಳೂರು: ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಸೇರಿದಂತೆ 12 ವಿಧೇಯಕಗಳನ್ನು ವಿಧಾನಸಭೆಯಲ್ಲಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಮಂಡಿಸಿದರು.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿದ್ದು, ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದರು.
ವಿಧೇಯಕ ಮಂಡನೆಯ ವೇಳೆ ವಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, “ಒಪ್ಪಿಗೆ ಇಲ್ಲ” ಎಂದು ಬಿಜೆಪಿ ಶಾಸಕರು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧೇಯಕದಲ್ಲಿ ಏನಿದೆ?
ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ವಾಸಸ್ಥಾನ, ಅಂಗವೈಕಲ್ಯ, ಬುಡಕಟ್ಟು ಸೇರಿದಂತೆ ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವುದು ಅಪರಾಧ.
ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ₹5,000 ದಂಡ, ಅಥವಾ ಎರಡನ್ನೂ ವಿಧಿಸಲು ನಿಬಂಧನೆ.
ದ್ವೇಷ ಭಾಷಣವನ್ನು ಉತ್ತೇಜಿಸುವಂತೆ ಉದ್ದೇಶಪೂರ್ವಕವಾಗಿ ಪ್ರಚಾರ, ಪ್ರಕಟಣೆ, ಸಮರ್ಥನೆ ಮಾಡುವವರಿಗೂ ಶಿಕ್ಷೆಯ ವ್ಯವಸ್ಥೆ.
ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ ಕೂಡ ದ್ವೇಷ ಅಪರಾಧದ ವ್ಯಾಪ್ತಿಗೆ ಒಳಪಡುವುದು.
ದತ್ತಾಂಶ, ಸಂದೇಶ, ಪಠ್ಯ, ಚಿತ್ರ, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂ, ಸಾಫ್ಟ್‌ವೇರ್, ಡೇಟಾಬೇಸ್, ಮೈಕ್ರೋಫಿಲ್ಮ್ ಮೂಲಕ ಹರಡುವ ದ್ವೇಷ ಭಾಷಣವೂ ಕಾನೂನು ಪ್ರಕಾರ ದಂಡನೀಯ.

