ಬೆಂಗಳೂರು, ಜನವರಿ 14: ಅಗರ ಬಳಿ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಭಾರಿ ದುರಂತವೊಂದು ತಪ್ಪಿದ ಘಟನೆ ನಡೆದಿದೆ. ಕಾಮಗಾರಿಯ ಸಂದರ್ಭದಲ್ಲಿ ಕಂಟ್ರೋಲ್ ತಪ್ಪಿದ ಬೃಹತ್ ಕ್ರೇನ್ ವಾಹನ ಆಯತಪ್ಪಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಾಹಿತಿಯ ಪ್ರಕಾರ, ಕ್ರೇನ್‌ನ ಹಿಂದಭಾಗಕ್ಕೆ ಅಗತ್ಯ ತೂಕದ ವಸ್ತುಗಳನ್ನು ಇರಿಸದೆ ಮುಂಭಾಗದಿಂದ ಗರ್ಡರ್ ಎತ್ತಲು ಪ್ರಯತ್ನಿಸಿದ ವೇಳೆ ಸಮತೋಲನ ತಪ್ಪಿದೆ. ಪರಿಣಾಮವಾಗಿ ಕ್ರೇನ್ ವಾಹನ ಉರುಳಿ ಬಿದ್ದಿದೆ. ಈ ವೇಳೆ ಕ್ರೇನ್ ಆಪರೇಟರ್ ತಕ್ಷಣವೇ ವಾಹನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಘಟನೆ ಇಂದು ಮುಂಜಾನೆ ಸುಮಾರು 3.45ರ ವೇಳೆಗೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ HSR ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾದರೂ, ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳು ಘಟನೆಯ ಕಾರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

