ನವದೆಹಲಿ, ಏಪ್ರಿಲ್ 19, 2026: ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರಮಾಣದ ಭಯೋತ್ಪಾದಕ ದಾಳಿ ನಡೆಸಲು ರೂಪಿಸಿದ್ದ ಸಂಚುವನ್ನು ದೆಹಲಿ ಪೊಲೀಸರ ವಿಶೇಷ ದಳ (Special Cell) ಭೇದಿಸಿದೆ. ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಶನಿವಾರ ಬಂಧಿಸಲಾಗಿದ್ದು, ಅವರಿಂದ ಸುಧಾರಿತ ಸ್ಫೋಟಕ ಸಾಧನಗಳನ್ನು (IED) ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಭದ್ರತಾ ಸಂಸ್ಥೆಗಳ ಕಣ್ಣು ತಪ್ಪಿಸಲು ಆರೋಪಿಗಳು ವಿನೂತನ ವಿಧಾನವನ್ನು ಅನುಸರಿಸಿದ್ದರು. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಚಲಿಸುವ ಆಟಿಕೆ ಕಾರುಗಳೊಳಗೆ ಐಇಡಿ ಅಳವಡಿಸಿ ಸ್ಫೋಟಿಸಲು ಇವರು ಸಂಚು ರೂಪಿಸಿದ್ದರು. ದಾಳಿಗೆ ಮುನ್ನ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಪರಿಶೀಲನೆ (ರೆಕ್ಕಿ) ನಡೆಸಿರುವುದು ಕೂಡ ಬೆಳಕಿಗೆ ಬಂದಿದೆ.
ಬಂಧಿತರು ಎನ್‌ಕ್ರಿಪ್ಟ್ ಮಾಡಲಾದ ಸಾಮಾಜಿಕ ಜಾಲತಾಣಗಳ ಮೂಲಕ ಅಂತರರಾಷ್ಟ್ರೀಯ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಜಿಹಾದಿ ಸಿದ್ಧಾಂತದತ್ತ ಯುವಕರನ್ನು ಸೆಳೆಯಲು ಹಾಗೂ ತೀವ್ರಗಾಮಿ ವಿಚಾರಗಳನ್ನು ಹಂಚಿಕೊಳ್ಳಲು ಇವರು ಆನ್‌ಲೈನ್ ವೇದಿಕೆಗಳನ್ನು ಬಳಸುತ್ತಿದ್ದರು. ಹಣಕಾಸು ವ್ಯವಹಾರಗಳಿಗಾಗಿ ಡಿಜಿಟಲ್ ಪಾವತಿ ವಿಧಾನಗಳನ್ನು ಉಪಯೋಗಿಸಿರುವ ಅಂಶವೂ ತನಿಖೆಯಲ್ಲಿ ಪತ್ತೆಯಾಗಿದೆ.
ಕಾರ್ಯಾಚರಣೆಯ ವೇಳೆ ಐಇಡಿ, ರಿಮೋಟ್ ಕಂಟ್ರೋಲ್ ಸಾಧನಗಳು, ಬ್ಯಾಟರಿಗಳು ಮತ್ತು ಸ್ಫೋಟಕಕ್ಕೆ ಬಳಸುವ ವೈರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಒಬ್ಬ ತಾಂತ್ರಿಕ ಪರಿಣಿತನಾಗಿದ್ದು, ಆಟಿಕೆ ಕಾರುಗಳ ಸರ್ಕ್ಯೂಟ್ ಬದಲಿಸಿ ಅವುಗಳನ್ನು ಸ್ಫೋಟಕ ಸಾಧನಗಳಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಎಟಿಎಸ್ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದ ಇಬ್ಬರು, ಒಡಿಶಾ ಮತ್ತು ಬಿಹಾರದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ಜಾಲದ ಹಿಂದೆ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ತೀವ್ರಗೊಂಡಿದೆ.

