ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತ ಗೌಡ ಅವರು ಅಕ್ರಮವಾಗಿ ಕಟ್ಟಲಾಗಿದ್ದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ, ಸಚಿವ ಮುನಿಯಪ್ಪ ರಾಜೀವ್ ಗೌಡ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜೀವ್ ಗೌಡ ಒಬ್ಬ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಮುನಿಯಪ್ಪ, “ಆತನನ್ನು ಕರೆದು ಬುದ್ಧಿ ಹೇಳುತ್ತೇನೆ. ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿರುವವರೊಂದಿಗೆ ಈ ರೀತಿಯಲ್ಲಿ ಮಾತನಾಡಬಾರದು. ಕೂಲಂಕಷವಾಗಿ ಯೋಚಿಸಿ ಮಾತನಾಡಬೇಕು. ಇಂತಹ ವರ್ತನೆ ಅನಾಗರಿಕತೆ. ಸುಸಂಸ್ಕೃತರು ಹೀಗೆ ಮಾತನಾಡಬಾರದು” ಎಂದು ಹೇಳಿದರು.
ರಾಜೀವ್ ಗೌಡ ಅವರ ವಾದದಂತೆ, ಹಿಂದೆ ಜೆಡಿಎಸ್ ಪಕ್ಷದ ಬ್ಯಾನರ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಬ್ಯಾನರ್‌ಗಳನ್ನು ಮಾತ್ರ ತೆಗೆದುಹಾಕಲಾಗಿದೆ ಎಂಬ ಅಸಮಾಧಾನದಿಂದ ಅವರು ಭಾವೋದ್ರಿಕ್ತರಾಗಿದ್ದಾರೆ ಎಂದು ಮುನಿಯಪ್ಪ ವಿವರಿಸಿದರು. “ಜೆಡಿಎಸ್‌ನ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ತೆಗೆಸಲಾಗಿಲ್ಲ, ಕೇವಲ ಕಾಂಗ್ರೆಸ್‌ನದ್ದನ್ನು ಮಾತ್ರ ತೆಗೆಸಲಾಗಿದೆ ಎಂಬುದು ರಾಜೀವ್ ಗೌಡ ಅವರ ವಾದ” ಎಂದರು.
ಇನ್ನೂ, “ರಾಜೀವ್ ಗೌಡ ಬಡವರ ಪರ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಒಂದೇ ಒಂದು ದಿನವೂ ಇಂತಹ ಅಚಾತುರ್ಯ ತೋರಿಲ್ಲ. ಆದರೆ ಈ ಬಾರಿ ಭಾವನೆಗೆ ಒಳಗಾಗಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದು ಸರಿಯಲ್ಲ” ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದರು.

