ಬೆಂಗಳೂರು, ಮಾ.14: “ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು. ಕುದುರೆ ವ್ಯಾಪಾರಕ್ಕೆ ಹೆಸರುವಾಸಿಯಾಗಿರುವ ಬಿಜೆಪಿ ವಿರುದ್ಧ ನಾವು ಎಚ್ಚರಿಕೆಯಿಂದಿದ್ದೇವೆ. ಅದಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ,” ಎಂದು ಉಪ ಮುಖ್ಯಮಂತ್ರಿ D. K. Shivakumar ತೀವ್ರವಾಗಿ ವಾಗ್ದಾಳಿ ನಡೆಸಿದರು.
ವಿಧಾನಸೌಧದ ಆವರಣದಲ್ಲಿ ಹಾಗೂ ಬಿಡದಿಯ ರೆಸಾರ್ಟ್ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಒಡಿಶಾ ಶಾಸಕರು ರಾಮನಗರದ ರೆಸಾರ್ಟ್‌ನಲ್ಲಿ ತಂಗಿರುವ ವಿಚಾರಕ್ಕೆ ಸ್ಪಷ್ಟನೆ ನೀಡಿದರು.
ರಾಜಕೀಯ ಪಕ್ಷಗಳಿಗೆ ಕೆಲವೊಮ್ಮೆ ಕುದುರೆ ವ್ಯಾಪಾರದ ಭೀತಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಎದುರಿಸುವ ಸಾಮಾನ್ಯ ಸಮಸ್ಯೆ ಇದಾಗಿದೆ. ಒಡಿಶಾ ಶಾಸಕರು ಇಲ್ಲಿಗೆ ಬಂದಿರುವಾಗ ಅವರಿಗೆ ಅಗತ್ಯ ನೆರವು ನೀಡುವುದು ನಮ್ಮ ಕರ್ತವ್ಯ. ನಾನು ಹಾಗೂ ನಮ್ಮ ಶಾಸಕರು ಅವರನ್ನು ಭೇಟಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಅವರದೇ ಶಾಸಕರ ಮೇಲೆ ನಂಬಿಕೆ ಇಲ್ಲ ಎಂಬ ಕೇಂದ್ರ ಸಚಿವ Pralhad Joshi ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಹಾಗಿದ್ದರೆ ಅವರು ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಸಿದ್ದು ಯಾಕೆ?” ಎಂದು ಪ್ರಶ್ನಿಸಿದರು.
ನಮ್ಮ ಶಾಸಕರಿಗೆ ದೊಡ್ಡ ಆಫರ್‌ಗಳು ಬಂದಿವೆ
ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಪರೇಷನ್ ಕಮಲದ ಭೀತಿ ಎದುರಾಗಿರುವುದಾಗಿ ಅವರು ಹೇಳಿದರು. ನಮ್ಮ ಶಾಸಕರ ಮೇಲೆ ಒತ್ತಡವಿದ್ದು, ದೊಡ್ಡ ದೊಡ್ಡ ಆಫರ್‌ಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು. ಸುಮಾರು 14–15 ಜನ ಶಾಸಕರು ಇಲ್ಲಿ ತಂಗಿದ್ದಾರೆ. ಒಡಿಶಾ ಪಿಸಿಸಿ ಅಧ್ಯಕ್ಷರು ಕರೆ ಮಾಡಿ ಜಾತ್ಯಾತೀತ ಪಕ್ಷಗಳು ಒಂದಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅವರ ಮನವಿಗೆ ಗೌರವ ನೀಡಿ ಇಲ್ಲಿ ಉತ್ತಮ ವಾತಾವರಣವಿದೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಬಿಜೆಡಿ, ಕಮ್ಯುನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಬಿಜೆಪಿ ತಮ್ಮ ಕೆಲಸ ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಯಾರೂ ಮುಟ್ಟಲೂ ಆಗುವುದಿಲ್ಲ
ಟ್ರಬಲ್ ಶೂಟರ್ ಕೆಲಸ ಮುಗಿದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಮಾಗಡಿ ಬಾಲಕೃಷ್ಣ ಮತ್ತು ಸಿ.ಪಿ. ಯೋಗೇಶ್ವರ್ ಅವರಂತಹ ನಾಯಕರ ಅನುಭವದ ಮೇಲೆ ನಾವು ನಂಬಿಕೆ ಇಟ್ಟುಕೊಂಡಿದ್ದೇವೆ. ನಮ್ಮ ಜಿಲ್ಲೆಯ ಎಲ್ಲ ಶಾಸಕರಿಗೂ ಜವಾಬ್ದಾರಿ ಇದೆ. ಯಾರೂ ಇಲ್ಲಿ ಬರಲು ಆಗುವುದಿಲ್ಲ, ಮುಟ್ಟಲೂ ಆಗುವುದಿಲ್ಲ, ಮಾತನಾಡುವುದಕ್ಕೂ ಅವಕಾಶ ಇಲ್ಲ ಎಂದು ಹೇಳಿದರು.
ಈ ಹಿಂದೆ ಗುಜರಾತ್ ಚುನಾವಣೆಯ ಸಮಯದಲ್ಲೂ ಪಕ್ಷಕ್ಕೆ ನೆರವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಅದ ಬಗ್ಗೆ ಮಾತನಾಡುವುದಿಲ್ಲ. ಕಾದು ನೋಡೋಣ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ,” ಎಂದು ಹೇಳಿದರು.
ಶಾಸಕರನ್ನು ಯಾವಾಗ ವಾಪಸ್ ಕರೆದುಕೊಂಡು ಹೋಗುವುದು ಎಂಬ ಪ್ರಶ್ನೆಗೆ, “ಅದನ್ನು ನಾವು ತೀರ್ಮಾನ ಮಾಡುತ್ತೇವೆ,” ಎಂದು ಅವರು ಹೇಳಿದರು.

