ಬೆಂಗಳೂರು,ಆ.10- ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆರವೇರಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ದೊರೆಯಿತು. ಎಚ್‌ಎಎಲ್ ವಿಮಾನನಿಲ್ದಾಣದಿಂದ ಹೆಲಿಕಾಫ್ಟರ್ ಮೂಲಕ ಮೇಖ್ರಿವೃತ್ತದಲ್ಲಿರುವ ಎಚ್‌ಕ್ಯೂಟಿಸಿ ಕೇಂದ್ರದಿಂದ ಹೊರಟ ಮೋದಿಯವರಿಗೆ ನಗರದ 5 ಸ್ಥಳಗಳಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಜೈಕಾರದ ಘೋಷಣೆಗಳನ್ನು ಕೂಗಿ ಸ್ವಾಗತ ಕೋರಿದರು.
ಮೇಖ್ರಿ ವೃತ್ತದಲ್ಲಿ ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಕೆ.ಆರ್.ಪುರಂ ಮತ್ತಿತರ ಕ್ಷೇತ್ರಗಳಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ತಮ ನೆಚ್ಚಿನ ನಾಯಕನನ್ನು ಕಾಣುತ್ತಲೇ ಪುಳಕಿತರಾದರು.ಬೆಳಗಿನಿಂದಲೇ ಮೇಖ್ರಿ ವೃತ್ತಕ್ಕೆ ಆಗಮಿಸಿದ್ದ ಕಾರ್ಯಕರ್ತರು ಬಿಜೆಪಿ ಬಾವುಟ ಧರಿಸಿ, ಕೈಯಲ್ಲಿ ಕಮಲದ ಹೂ ಹಿಡಿದು ಮೋದಿ ಆಗಮಿಸುತ್ತಿದ್ದಂತೆ ಮೋದಿ, ಮೋದಿ ಎಂದು ಜೈಕಾರದ ಘೋಷಣೆಗಳನ್ನು ಕೂಗಿದರು.
ಬಿಳಿ ಬಣ್ಣದ ಕುರ್ತ, ಬಿಳಿ ಬಣ್ಣದ ಪೈಜಾಮ ಹಾಗೂ ಕಪ್ಪು ಬಣ್ಣದ ಕೋಟ್ ಧರಿಸಿದ್ದ ಮೋದಿಯವರು ಕುಳಿತ ಸ್ಥಳದಲ್ಲೇ ಕಾರ್ಯಕರ್ತರತ್ತ ಕೈಬೀಸಿದರು. ಬಳ್ಳಾರಿ ರಸ್ತೆಯ ಇಕ್ಕೆಲಗಳಲ್ಲೂ ಭಾರೀ ಪ್ರಮಾಣದ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಅಭಿಮಾನಿಗಳ ಜೈಕಾರ, ಹಷೋದ್ಘಾರಕ್ಕೆ ಪಾರವೇ ಇರಲಿಲ್ಲ. ಅಲ್ಲಿಂದ ಚಾಲುಕ್ಯ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಮೋದಿಯವರು ಕೈ ಬೀಸಿದರು.
ಬಳಿಕ ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಜೈಕಾರ ಮೊಳಗಿಸಿದರು.ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ಕೊಟ್ಟ ನಂತರ ನೇರವಾಗಿ ಸೌತ್ ಎಂಡ್ ವೃತ್ತಕ್ಕೆ ವಾಹನದಲ್ಲೇ ಆಗಮಿಸಿದರು.
ಈ ಸಂದರ್ಭದಲ್ಲಿಯೂ ಚಿಕ್ಕಪೇಟೆ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಬೊಮನಹಳ್ಳಿ ಸೇರಿದಂತೆ ಮತ್ತಿತರ ಕ್ಷೇತ್ರಗಳಿಂದ ಆಗಮಿಸಿದ್ದ ಕಾರ್ಯಕರ್ತರು ಮೋದಿಯವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ರಾಗಿಗುಡ್ಡ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಸ್ಟೇಷನ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವೇಳೆಯೂ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

