ಬೆಂಗಳೂರು: ನವೆಂಬರ್ ಆರಂಭದಲ್ಲೇ ರಾಜ್ಯದಲ್ಲಿ ಚಳಿಯು ವಾತಾವರಣ ಕಂಡು ಬಂದಿದೆ. ದಿನೇ ದಿನೇ ಚಳಿಯ ಪ್ರಮಾಣ ಹೆಚ್ಚಾಗತೊಡಗಿದ್ದು, 10ಕ್ಕೂ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ. ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಇಲ್ಲವೇ ಡಿಸೆಂಬರ್ ಮೊದಲ ವಾರ ಚಳಿಗಾಲ ಶುರುವಾಗುತ್ತದೆ. ಈ ಬಾರಿ ನವೆಂಬರ್ ಮೊದಲ ವಾರವೇ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಂಭವ ಇದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೀದರ್, ಬೆಳಗಾವಿ, ತುಮಕೂರು, ಚಾಮರಾಜನಗರ ಮೊದಲಾದ ಕಡೆಗಳಲ್ಲಿ ಬೆಳಗಿನ ಉಷ್ಣಾಂಶ ತೀವ್ರ ಕುಸಿತವಾಗಿದೆ.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶೀತ ಗಾಳಿ ಬೀಸುವ ಸಾಧ್ಯತೆ ಇದೆ. ಈ ಬಾರಿ ವಾಡಿಕೆ ಇಲ್ಲವೇ ವಾಡಿಕೆಗಿಂತ ಹೆಚ್ಚು ಚಳಿಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ :
ನವೆಂಬರ್ ಮೊದಲ ವಾರದಲ್ಲಿ ದೇಶಾದ್ಯಂತ ಹವಾಮಾನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ. ಮುಂದಿನ ಕೆಲವು ದಿನಗಳಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವಾರು ಭಾಗಗಳಲ್ಲಿ ಮಳೆ, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಇತ್ತೀಚಿನ ಮುನ್ಸೂಚನೆಯಲ್ಲಿ ತಿಳಿಸಿದೆ. ಈ ಕಾರಣಕ್ಕಾಗಿ ಹಳದಿ ಎಚ್ಚರಿಕೆ ನೀಡಲಾಗಿದೆ. ಹೆಚ್ಚುವರಿಯಾಗಿ, ಅನೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ ವರೆಗೆ ಕಡಿಮೆಯಾಗಬಹುದು.
ಉತ್ತರ ಭಾರತದಲ್ಲಿ ಚಳಿಯ ಭೀತಿ
ಹವಾಮಾನ ಇಲಾಖೆ (IMD) ಪ್ರಕಾರ, ನವೆಂಬರ್ 4 ಮತ್ತು 5, 2025 ರಂದು ಪಶ್ಚಿಮ ಹಿಮಾಲಯ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ. ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿಯೂ ಸಹ ಹಗುರ ಮಳೆಯಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಗುಡುಗು ಸಹಿತ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಇದರ ಜೊತೆಗೆ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

