ಹುಬ್ಬಳ್ಳಿ: ಜೈಲಿನಲ್ಲಿ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ, ಮತ್ತು ತನಿಖೆ ವೇಳೆ ರಿಟ್ರೀವ್ ಮಾಡಿರುವ ಫೋಟೋಗಳನ್ನು ರಾಜ್ಯ ಸರ್ಕಾರ ಬಹಿರಂಗಪಡಿಸುವ ಮೂಲಕ ಮುಡಾ ಹಗರಣ ಡೈವರ್ಟ್ ಮಾಡುವ ಸಂಕುಚಿತ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ.
ಕ್ರೂರವಾಗಿ ರೇಣುಕಾಸ್ವಾಮಿ ಹತ್ಯೆಗೈದ ಆರೋಪಿಗಳಿಗೆ ಶಿಕ್ಷೆಯಾಗಬೇಕು.ಇದರಲ್ಲಿ ಯಾವ ಅನುಮಾನ ಇಲ್ಲ. ರಿಟ್ರೀವ್ ಮಾಡಿರುವ ಫೋಟೋ ಬಿಟ್ಟಿರೋದು ಅಕ್ಷಮ್ಯ ಅಪರಾಧ. ಈ ವಿಚಾರವನ್ನು ನ್ಯಾಯಾಲಯ ಕೂಡ ಪರಿಗಣನೆಗೆ ತೆಗೆದುಕೊಳ್ಳುತ್ತೆ. ಫೋಟೋ ಹೊರಗಡೆ ಬಿಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು. ವಿಷಯ ಡೈವರ್ಟ್ ಮಾಡುವುದಕ್ಕೆ ರಾಜ್ಯ ಸರ್ಕಾರ ಈ ತರಹ ಮಾಡುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಹಗರಣದ ದಾಖಲೆ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಸುಧಾಕರ್,ಅಶೋಕ್ ಎಲ್ಲರೂ ಮಾತಾಡಿದ್ದಾರೆ. ತನಿಖೆ ಆಗಲಿ. ನೀವು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಯಿತು ಇವಾಗ ಯಾಕೆ ಲೆಕ್ಕ ಪತ್ರ ಸಮಿತಿ ಹೊರಗಡೆ ಬಿಟ್ಟಿದ್ದೀರಿ. ನೀವು ಕಳ್ಳತನ ಮಾಡಿದಾಗ, ಮತ್ತೊಬ್ಬರು ಕಳ್ಳತನ ಮಾಡಿದ್ದಾರೆಂದು ಹೇಳಿ ಬಚಾವ್ ಆಗೋ ಪ್ರಯತ್ನವಾ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಪ್ರಕರಣ ಎಲ್ಲವೂ ಮುಡಾ ಹಗರಣ ಬಂದ ಮೇಲೆ ಅನ್ನೋದು ಆಶ್ಚರ್ಯ ಎಂದರು.

