ಮೈಸೂರು : ಮೈಸೂರಿನಲ್ಲಿ ಜುಲೈ 19ರಂದು ನಡೆಯುತ್ತಿರುವ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ಮಾತು ಆರಂಭಿಸುವ ಮುನ್ನ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲಿದ್ದ ಗಣ್ಯರೆಲ್ಲರನ್ನೂ ಆಹ್ವಾನಿಸಿದ್ದಾರೆ. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಯವರನ್ನೇ ಸ್ವಾಗತಿಸಿಲ್ಲ.
ಡಿ.ಕೆ. ಶಿವಕುಮಾರ್ಯವರನ್ನೇ ಸ್ವಾಗತಿಸಿಲ್ಲ ಅನ್ನೋದು ಗಮನಿಸಿದ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರೊಬ್ಬರು ಮುಖ್ಯಮಂತ್ರಿಗಳ ಬಳಿಗೆ ಹೋಗಿ ಕಿವಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ರನ್ನೇ ಮರೆತಿರಿ ಎಂದು ಜ್ಞಾಪಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವೇದಿಕೆಯ ಮೇಲಿದ್ದವರನ್ನಷ್ಟೇ ಯಾವಾಗಲೂ ಸ್ವಾಗತ ಮಾಡುತ್ತಾರೆ. ಡಿ.ಕೆ ಶಿವಕುಮಾರ್ ಎಲ್ಲಿದ್ದಾರೆ? ಅವರು ಆಗಲೇ ಬೆಂಗಳೂರಿಗೆ ಹೊರಟು ಹೋದರು. ಅವರನ್ನು ಹೇಗೆ ನಾನು ಈಗ ಸ್ವಾಗತ ಮಾಡಲಿ ಎಂದು ಪ್ರಶ್ನಿಸಿದ್ದಾರೆ.
ಮಾತು ಮುಂದುವರಿಸಿದ ಸಿದ್ದರಾಮಯ್ಯ, ‘ಡಿಕೆಶಿಯವರು ಕಾರ್ಯಕ್ರಮಕ್ಕೆ ಬಂದಿದ್ದು ನಿಜ. ಆದರೆ, ಕಾರಣ ನಿಮಿತ್ತ ಬೆಂಗಳೂರಿಗೆ ಹೊರಟು ಹೋಗಿದ್ದಾರೆ. ಯಾವಾಗಲೂ ವೇದಿಕೆಯ ಮೇಲಿದ್ದವರಿಗೆ ಸ್ವಾಗತ ಕೋರಲಾಗುತ್ತದೆಯೇ ಹೊರತು ಮನೆಯಲ್ಲಿ ಕುಳಿತವರಿಗಲ್ಲ’ ಎಂದು ಹೇಳುವ ಮೂಲಕ ಡಿಕೆಶಿಯವರನ್ನು ಸ್ವಾಗತಿಸದಿದ್ದಕ್ಕೆ ಸಮರ್ಥನೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಸಚಿವ ಹೆಚ್‌ಸಿ ಮಹಾದೇವಪ್ಪ ವಿರುದ್ಧ ಕೋಪಗೊಂಡ ಪ್ರಸಂಗ ಕೂಡ ನಡೆಯಿತು. ಸಾಧನಾ ಸಮಾವೇಶ ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದಾಗ ಸಚಿವ ಮಹಾದೇವಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಕೋಪಗೊಂಡ ಮಲ್ಲಿಕಾರ್ಜುನ ಖರ್ಗೆ, ಏಯ್ ಮಹದೇವಪ್ಪ ಸಿಎಂ ಕಿವಿಗೆ ಏನು ತುಂಬಬೇಡ, ಅವರು ಇಲ್ಲಿ ಕೇಳಿಸಿಕೊಳ್ಳಲಿ. ಅವರ ಕಿವಿ ಸರಿಯಾಗಿದೆ ಎಂದು ಗದರಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭಾಷಣದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕೂಗಾಡುತ್ತಿದ್ದರು. ಇದರಿಂದಲೂ ಕೆರಳಿದ ಖರ್ಗೆ, ಕಾರ್ಯಕರ್ತರಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ದೇಶಕ್ಕೆ ಬೇಕಾದ ಸತ್ಯ ಹೇಳುತ್ತಿದ್ದೇನೆ, ಕೇಳೊಕಾದ್ರೆ ಕೇಳಿ ಇಲ್ಲವಾದ್ರೆ ಎದ್ದು ಹೋಗಿ ಎಂದು ಕೈ ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ನೀಡಿದರು. ಖರ್ಗೆ ವಾರ್ನಿಂಗ್‌ಗೆ ಕಾರ್ಯಕರ್ತರು ಗಪ್ ಚುಪ್ ಆದ ಪ್ರಸಂಗವೂ ನಡೆಯಿತು

