ನವದೆಹಲಿ, ಏಪ್ರಿಲ್ 16: Narendra Modi ಅವರು ಮಹಿಳಾ ಮೀಸಲಾತಿ ಮಸೂದೆ ಕುರಿತು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿ, ಇದನ್ನು ಮಹಿಳಾ ಸಬಲೀಕರಣದ “ಐತಿಹಾಸಿಕ ಹೆಜ್ಜೆ” ಎಂದು ಬಣ್ಣಿಸಿದರು. “ಮಹಿಳಾ ಮೀಸಲಾತಿಗೆ ರಾಜಕೀಯದ ಬಣ್ಣ ಬಳಿಯುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ ಅವರು, ಈ ಕಾಯ್ದೆ 25–30 ವರ್ಷಗಳ ಹಿಂದೆಯೇ ಜಾರಿಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಸೂದೆಗೆ ತಾತ್ವಿಕವಾಗಿ ಯಾವುದೇ ಪಕ್ಷವೂ ವಿರೋಧ ವ್ಯಕ್ತಪಡಿಸಿಲ್ಲ ಎಂದರು. ಆದರೆ ನಂತರ ರಾಜಕೀಯ ದೃಷ್ಟಿಕೋನದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಟೀಕಿಸಿದರು. “ನಾವೆಲ್ಲರೂ ಒಟ್ಟಾಗಿ ಈ ಮಸೂದೆಯನ್ನು ಜಾರಿಗೊಳಿಸಿದರೆ, ದೇಶಕ್ಕೆ ಮಾಡಿದ ಸೇವೆಗಾಗಿ ಇತಿಹಾಸವು ನಮ್ಮನ್ನು ನೆನಪಿಸಿಕೊಳ್ಳುತ್ತದೆ” ಎಂದು ಹೇಳಿದರು.
ಮಹಿಳೆಯರ ಪಾಲ್ಗೊಳ್ಳುವಿಕೆ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ್ದಾಗಿದೆ ಎಂದು ಒತ್ತಿಹೇಳಿದ ಅವರು, “ಭಾರತ ಪ್ರಜಾಪ್ರಭುತ್ವದ ತಾಯಿ. ದೇಶದ ಅರ್ಧದಷ್ಟು ಜನಸಂಖ್ಯೆಯಾದ ಮಹಿಳೆಯರನ್ನು ನಿರ್ಧಾರ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳುವ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ” ಎಂದರು. ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಇದು ಅಗತ್ಯವಾದ ಹೆಜ್ಜೆಯಾಗಿದೆ ಎಂದರು.
“ಈ ಮಸೂದೆ ಅಂಗೀಕಾರವಾದರೆ, ಅದು ಯಾವುದೇ ಒಂದು ಪಕ್ಷದ ಗೆಲುವಲ್ಲ; ಇಡೀ ರಾಷ್ಟ್ರದ ಸಾಮೂಹಿಕ ಯಶಸ್ಸು” ಎಂದು ಹೇಳಿದ್ದಾರೆ. ಹೀಗಾಗಿ, ಮಹಿಳಾ ಮೀಸಲಾತಿ ಮಸೂದೆಗೆ ರಾಜಕೀಯ ಬಣ್ಣ ನೀಡಬಾರದು ಎಂದು ಮತ್ತೆ ಒತ್ತಿಹೇಳಿದರು.
ವಿಪಕ್ಷಗಳಿಗೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, “ಮಹಿಳಾ ಮೀಸಲಾತಿಯನ್ನು ವಿರೋಧಿಸುವವರನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ” ಎಂದರು. 2023ರಲ್ಲಿ ಮೊದಲಿಗೆ ಮಂಡಿಸಲಾದ ಈ ಮಸೂದೆ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದ್ದರೂ, ಜನಗಣತಿ ಪ್ರಕ್ರಿಯೆಯ ವಿಳಂಬದಿಂದ ಜಾರಿಗೆ ಬರಲಿಲ್ಲ. ಇದೀಗ 2011ರ ಜನಗಣತಿಯ ಆಧಾರದ ಮೇಲೆ ಶೀಘ್ರ ಜಾರಿಗೆ ತರಲು ಕೇಂದ್ರ ಸರ್ಕಾರ ಒತ್ತಾಯಿಸುತ್ತಿದೆ.

