ಲೇಹ್, ಜನವರಿ 19: ಲಡಾಖ್‌ನ ಲೇಹ್ (Leh) ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.
NCS ವರದಿ ಪ್ರಕಾರ, ಭೂಕಂಪವು 11:51:14 ISTಕ್ಕೆ ಸಂಭವಿಸಿದ್ದು, ಭೂಕಂಪನದ ಕೇಂದ್ರವು 171 ಕಿಲೋಮೀಟರ್ ಆಳದಲ್ಲಿ ಇತ್ತು. ಭೂಕಂಪವು 36.71 ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 74.32 ಡಿಗ್ರಿ ಪೂರ್ವ ರೇಖಾಂಶದಲ್ಲಿ ದಾಖಲಾಗಿದೆ.
ಈ ಕುರಿತು X (ಹಳೆಯ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ, “EQ of M: 5.7, Date: 19/01/2026, Time: 11:51:14 IST, Latitude: 36.71 N, Longitude: 74.32 E, Depth: 171 km, Location: Leh, Ladakh” ಎಂದು ತಿಳಿಸಿದೆ.
ಭೂಕಂಪದ ಪರಿಣಾಮವಾಗಿ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣದ ವರದಿಗಳು ಲಭ್ಯವಾಗಿಲ್ಲ. ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ನಿಗಾ ವಹಿಸಿದೆ.
ಇತ್ತೀಚೆಗೆ ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ಹಲವು ಭಾಗಗಳಲ್ಲಿ ಭೂಕಂಪನ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲೇ ಲಡಾಖ್‌ನಲ್ಲಿ ಈ ಭೂಕಂಪ ಸಂಭವಿಸಿದೆ. ಭಾನುವಾರ ಸಂಜೆ, ಅಫ್ಘಾನಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದು ಜನವರಿ 18 ರಂದು 20:30 ISTಕ್ಕೆ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು NCS ವರದಿ ಮಾಡಿತ್ತು.

