ಗದಗ, ಜನವರಿ 18: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ನಡುವೆಯೇ ಪುರಾತನ ಶಿವಲಿಂಗವೊಂದು ಪತ್ತೆಯಾಗಿರುವ ಘಟನೆ ಗಮನ ಸೆಳೆದಿದೆ. ಲಕ್ಕುಂಡಿಯ ಕೋಟೆ ಗೋಡೆಯ ಸಮೀಪದಲ್ಲಿದ್ದ ಹಳೆಯ ಶಾಲಾ ಕಟ್ಟಡವನ್ನು ಕೆಡವುವ ಸಂದರ್ಭದಲ್ಲಿ ಈ ಶಿವಲಿಂಗ ಬೆಳಕಿಗೆ ಬಂದಿದೆ.
ನಿಧಿ ಶೋಧನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ಅದಕ್ಕೆ ಸಮೀಪದಲ್ಲಿಯೇ ಇರುವ ಶಾಲಾ ಕಟ್ಟಡವನ್ನು ಸಂಪೂರ್ಣವಾಗಿ ಡೆಮಾಲಿಶ್ ಮಾಡಲಾಗುತ್ತಿತ್ತು. ಈ ವೇಳೆ ಕೆಡವಲಾದ ಗೋಡೆಯ ಅವಶೇಷಗಳ ನಡುವೆ ಗ್ರಾಮಸ್ಥರ ಕಣ್ಣಿಗೆ ಮೊದಲು ಈ ಶಿವಲಿಂಗ ಬಿದ್ದಿದೆ.
ಪತ್ತೆಯಾದ ಶಿವಲಿಂಗವು ಅತ್ಯಂತ ಪುರಾತನ ಕಾಲಕ್ಕೆ ಸೇರಿದದ್ದಾಗಿರಬಹುದೆಂದು ಸ್ಥಳೀಯರು ಅಂದಾಜು ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಶಿವಲಿಂಗವು ಯಾವ ಕಾಲಘಟ್ಟಕ್ಕೆ ಸೇರಿದೆ ಎಂಬುದನ್ನು ಅಧ್ಯಯನದ ನಂತರ ಸ್ಪಷ್ಟಪಡಿಸಲಾಗುವುದಾಗಿ ತಿಳಿಸಿದ್ದಾರೆ.

