‘ಬ್ಯಾಚುಲರ್ ಪಾರ್ಟಿ’ ಚಿತ್ರದ ಹಾಡಿನ ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಹೋರಾಟ ಮಾಡುವುದಾಗಿ ರಕ್ಷಿತ್ ಶೆಟ್ಟಿ ಸುದೀರ್ಘ ಪತ್ರ ಬರೆದಿದ್ದಾರೆ. ನ್ಯಾಯ ಮತ್ತು ಪ್ರಭುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಇದನ್ನು ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಿಲಿ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ. ಇದರಿಂದ ಇನ್ನು ಮುಂಬರುವ ದಿನಗಳಲ್ಲಿ, ನಮಗಷ್ಟೇ ಅಲ್ಲ, ಬೇರೆ ಇನ್ಯಾವ ಸಿಸಿಮಾ ಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು, ನಮ್ಮ ಈ ಪ್ರಾಮಾಣಿಕ ಪ್ರಯತ್ನ ಎಂದು ಪರಂವಃ ಸ್ಟುಡಿಯೋಸ್ ಪತ್ರದ ಮೂಲಕ ಉತ್ತರಿಸಿದ್ದಾರೆ.
ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ದೂರು ನೀಡಿದ್ದಾರೆ. ನ್ಯಾಯ ಎಲ್ಲಿದೆ ಚಿತ್ರದ ‘ನ್ಯಾಯ ಎಲ್ಲಿದೆ ಹಾಡು’ ಮತ್ತು ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಅನಧಿಕೃತವಾಗಿ ಹಾಡು ಬಳಕೆ ಮಾಡಿದ ಆರೋಪದಲ್ಲಿ ಪರಂವಃ ಸ್ಟೂಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಬಳಕೆ ಆದ ‘ಗಾಳಿ ಮಾತು’ ಮತ್ತು ‘ನ್ಯಾಯ ಎಲ್ಲಿದೆ’ ಚಿತ್ರದ ಹಾಡುಗಳನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕನ್ನ ಖರೀದಿ ಮಾಡದೇ ಹಾಡುಗಳ ಬಳಕೆಯಾಗಿದೆ ಎಂದು ನವೀನ್ ಕುಮಾರ್ ಆರೋಪಿಸಿದ್ದಾರೆ.
2024ರ ಜನವರಿಯಲ್ಲಿ ಚಿತ್ರದ ಹಾಡುಗಳ ಬಳಕೆ ಬಗ್ಗೆ ಮಾತುಕತೆಯಾಗಿತ್ತು. ಆದರೆ ಈ ಸಿನಿಮಾದ ಹಾಡಿನ ಬಳಕೆ ಬಗ್ಗೆ ಮಾತುಕತೆ ಸರಿ ಹೊಂದದೇ ಇದ್ದರಿಂದ ಅಲ್ಲಿಗೆ ನಿಲ್ಲಿಸಲಾಗಿತ್ತು. ಬಳಿಕ 2024ರ ಮಾರ್ಚ್‌ನಲ್ಲಿ ಒಟಿಟಿಯಲ್ಲಿ ರಕ್ಷಿತ್ ಶೆಟ್ಟಿ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ರಿಲೀಸ್ ಆಗಿತ್ತು. ಈ ವೇಳೆ, ಸಿನಿಮಾ ಗಮಿಸಿದಾಗ ಎರಡು ಚಿತ್ರಗಳ ಹಾಡು ಬಳಕೆಯಾಗಿತ್ತು.

