ಶಿವಮೊಗ್ಗ : ಶಿವಮೊಗ್ಗದಲ್ಲಿ ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪದ ಪುಟ್ಟಪ್ಪ ಕ್ಯಾಂಪ್ ಲೇಔಟ್ ಒಂದರಲ್ಲಿ ಶನಿವಾರ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಆರು ದರೋಡೆಕೋರರ ಗ್ಯಾಂಗ್ ಶಸ್ತ್ರಾಸ್ತ್ರ ಹಿಡಿದು ಹೊಂಚು ಹಾಕುವಂತೆ ಓಡಾಡಿದ್ದಾರೆ. ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಡಾವಣೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ದರೋಡೆಕೋರರು ಜೀನ್ಸ್ ಪ್ಯಾಂಟ್, ಬನಿಯನ್ ಮಾತ್ರ ಧರಿಸಿದ್ದಾರೆ. ಸೊಂಟದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಾರೆ. ಗುರುತು ಮರೆ ಮಾಡಲು ಎಲ್ಲರೂ ಮುಖಕ್ಕೆ ಬಟ್ಟೆ ಕೊಟ್ಟಿಕೊಂಡಿದ್ದಾರೆ. ಕೈಯಲ್ಲಿ ಟಾರ್ಚ್ ಇದೆ. ಒಬ್ಬಾತ ಕೈಗೆ ಗ್ಲೌಸ್ ಧರಿಸಿದ್ದಾನೆ. ಮತ್ತೊಬ್ಬ ಬ್ಯಾಗ್ ಹಾಕಿದ್ದಾನೆ.
ಆರು ಮಂದಿ ಪುಟ್ಟಪ್ಪ ಕ್ಯಾಂಪ್ ಬಡಾವಣೆಯ ಎಲ್ಲ ರಸ್ತೆಗಳಲ್ಲಿಯೂ ನಡೆದುಕೊಂಡು ಹೋಗಿದ್ದಾರೆ. ಈ ದೃಶ್ಯ ನೋಡಿದ ಬಳಿಕ ಸ್ಥಳೀಯರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಎಲ್ಲರ ಅದೃಷ್ಟ ಚೆನ್ನಾಗಿತ್ತು, ನಿನ್ನೆ ಯಾವುದೇ ಮನೆಯಲ್ಲಿ ಕಳ್ಳತನವಾಗಿಲ್ಲ. ಕಳ್ಳರು ಬಂದು ಹೋಗಿರುವ ಸುದ್ದಿಯಿಂದ ಬಡಾವಣೆಯ ಜನರು ಸದ್ಯ ಭಯಭೀತರಾಗಿದ್ದಾರೆ.
ಬಡಾವಣೆಯ ಜನರು ಬೆಳಗ್ಗೆ ಎದ್ದು ಸಿಸಿ ಕ್ಯಾಮೆರಾ ಗಮನಿಸಿದಾಗ ಈ ದರೋಡೆಕೋರರ ಗ್ಯಾಂಗ್ ಓಡಾಡಿದ್ದು ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಶಿವಮೊಗ್ಗದ ತುಂಗಾ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕಾರಿಯಪ್ಪ ಹಾಗೂ ತುಂಗಾ ನಗರ ಪಿಐ ಗುರುರಾಜ್ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ.
ಈ ದರೋಡೆಕೋರರು ಬಂದು ಹೋದ ಬಳಿಕ ಪುಟ್ಟಪ್ಪ ಕ್ಯಾಂಪ್ನ ನಿವಾಸಿಗಳಿಗೆ ಭಯ ಶುರುವಾಗಿದೆ. ಬಡಾವಣೆಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ. ಒಟ್ಟು 150 ಜನರು ವಾಸವಾಗಿದ್ದಾರೆ. ಸರಕಾರಿ ನೌಕರರು ವಾಸವಾಗಿರುವ ಹೈಟೆಕ್ ಮನೆಗಳಿವೆ. ಕಳ್ಳರು ಮತ್ತು ದರೋಡೆಕೋರರು ಸಿಂಗಲ್ ಮನೆಗಳನ್ನು ನೋಡಿಕೊಂಡು ಟಾರ್ಗೆಟ್ ಮಾಡಿದ್ದಾರೆ.

