ಗದಗ, ಜನವರಿ 11: ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ನೆಲದೊಳಗೆ ಚಿನ್ನಾಭರಣಗಳಿರುವ ನಿಧಿ ಪತ್ತೆಯಾಗಿರುವ ಅಪರೂಪದ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಅವರಿಗೆ ಸೇರಿದ ಮನೆ ಜಾಗದಲ್ಲಿ ಈ ನಿಧಿ ಪತ್ತೆಯಾಗಿದೆ. ಮನೆಯ ಅಡಿಪಾಯಕ್ಕಾಗಿ ಅಗೆಯುವ ವೇಳೆ ಚಿನ್ನಾಭರಣಗಳು ಸಿಕ್ಕಿದ್ದು, ಇದನ್ನು ಗಂಗವ್ವ ಬಸವರಾಜ ರಿತ್ತಿ ಕುಟುಂಬಸ್ಥರು ಸ್ವಇಚ್ಛೆಯಿಂದ ಸರ್ಕಾರಕ್ಕೆ ಒಪ್ಪಿಸಲು ನಿರ್ಧರಿಸಿದ್ದಾರೆ.
ಅಡಿಪಾಯ ಅಗೆಯುವ ವೇಳೆ ಸಿಕ್ಕ ಚಿನ್ನಾಭರಣಗಳಿರುವ ನಿಧಿಯನ್ನು ತಾತ್ಕಾಲಿಕವಾಗಿ ಲಕ್ಕುಂಡಿ ಗ್ರಾಮದ ಗಣೇಶ ದೇವಸ್ಥಾನದಲ್ಲಿ ಇಡಲಾಗಿದ್ದು, ದೇವಸ್ಥಾನಕ್ಕೆ ಬೀಗ ಹಾಕಿ ಸೂಕ್ತ ಭದ್ರತೆ ಒದಗಿಸಲಾಗಿದೆ.
ನಿಧಿಯ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ನೂರಾರು ಜನರು ಭೇಟಿ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ದುರ್ಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರೋಹನ್ ಜಗದೀಶ್, ಸಹಾಯಕ ಆಯುಕ್ತ ರಂಗಪ್ಪ ಹಾಗೂ ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಹಾಗೂ ಪುರಾತತ್ವ ಇಲಾಖೆಯ ಸಿಬ್ಬಂದಿಯಿಂದ ನಿಧಿಯ ಪರಿಶೀಲನೆ ನಡೆಯಲಿದ್ದು, ಪತ್ತೆಯಾದ ಚಿನ್ನಾಭರಣಗಳು ಯಾವ ಕಾಲಘಟ್ಟಕ್ಕೆ ಸೇರಿವೆ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

