ಬುಡಾಪೆಸ್ಟ್: 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತದ ಪುರುಷರ ಹಾಗೂ ಮಹಿಳಾ ತಂಡಗಳು ತಮ್ಮ ತಮ್ಮ ಎದುರಾಳಿಗಳನ್ನು ಮಣಿಸಿ ಮೊದಲ ಬಾರಿಗೆ ಚಿನ್ನ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಭಾರತದ ಪುರುಷರ ತಂಡದ ಡಿ.ಗುಕೇಶ್, ಆರ್.ಪ್ರಜ್ಞಾನಂದ, ಅರ್ಜುನ್ ಎರಿಗೈಸಿ, ವಿದಿತ್ ಗುಜರಾತಿ ಮತ್ತು ಪೆಂಟಾಲ ಹರಿಕೃಷ್ಣ ಅವರು ಸ್ಲೊವೇನಿಯಾ ವಿರುದ್ಧ ಮಿಂಚುವ ಮೂಲಕ ಚಿನ್ನದ ಪದಕವನ್ನು ಪಡೆದರು.
ಡಿ.ಗುಕೇಶ್ ಮತ್ತು ಅರ್ಜುನ್ ಎರಿಗೈಸಿ ಅವರ ಗೆಲುವು ಭಾರತಕ್ಕೆ 2-0 ಮುನ್ನಡೆ ತಂದು ಚಿನ್ನದ ಪದಕವನ್ನು ಖಚಿತಪಡಿಸಿತು. ನಂತರದ ಅಂತಿಮ ಸುತ್ತಿನಲ್ಲಿ, ಪ್ರಜ್ಞಾನಂದ ಅವರ ಆಟವನ್ನು ಗೆದ್ದರು. ಭಾರತ ಸ್ಲೊವೇನಿಯಾವನ್ನು 3.5-0.5 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.
ಹರಿಕಾ ದ್ರೋಣವಲ್ಲಿ, ಆರ್.ವೈಶಾಲಿ, ದಿವ್ಯಾ ದೇಶಮುಖ್, ವಾಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್‌ದೇವ್ ಅವರಿದ್ದ ಭಾರತದ ಮಹಿಳಾ ಚೆಸ್ ತಂಡವು ಅಜರ್‌ಬೈಜಾನ್‌ನನ್ನು 3.5-0.5 ರಿಂದ ಸೋಲಿಸಿ ಚಿನ್ನ ಗೆದ್ದಿತು.

