ಟೋಕಿಯೊ : ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು ಜಪಾನ್‌ನ ಹವಾಮಾನ ಇಲಾಖೆ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಕ್ಯುಶು ಪ್ರದೇಶದ ಮಿಯಾಝಾಕಿ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಪಾನ್ ಹವಾಮಾನ ಸಂಸ್ಥೆ ಒಂದು ಮೀಟರ್ ವರೆಗಿನ ಸುನಾಮಿ ಅಲೆಗಳು ಏಳಬಹುದು ಎಂದು ಮುನ್ಸೂಚನೆ ನೀಡಿದೆ.
ಸಮುದ್ರದಲ್ಲಿ ಆರಂಭಿಕ ಹಂತದಲ್ಲಿ 3.2 ಅಡಿಗಳವರೆಗೆ ಅಲೆಗಳು ಏಳಲಾರಂಭಿಸಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.9ರಷ್ಟು ಇರುವುದರಿಂದ ಸಮುದ್ರದಲ್ಲಿನ ಅಲೆಗಳು ರಕ್ಕಸ ಅಲೆಗಳಾಗಿ ಮಾರ್ಪಡುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುನಾಮಿ ಪದೇ ಪದೇ ಅಪ್ಪಳಿಸಬಹುದು. ದಯವಿಟ್ಟು ಸಮುದ್ರಕ್ಕೆ ಇಳಿಯಬೇಡಿ, ಕರಾವಳಿ ಪ್ರದೇಶಗಳ ಬಳಿ ಹೋಗಬೇಡಿ ಎಂದು ಜೆಎಂಎ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
2004ರ ಡಿಸೆಂಬರ್ ಕಡೆಯ ವಾರದಲ್ಲೇ ಇಂಡೋನೇಷ್ಯಾದ ಸಮುದ್ರದಾಳದಲ್ಲಿ ಇಂಥದ್ದೇ ಭೂಕಂಪ ಸೃಷ್ಟಿಯಾಗಿ, ಅದು ದೊಡ್ಡ ಮಟ್ಟದ ಸುನಾಮಿಗೆ ಕಾರಣವಾಗಿತ್ತು. ಇಂಡೋನೇಷ್ಯಾ, ಜಪಾನ್, ಭಾರತದ ಚೆನ್ನೈ ಹಾಗೂ ಪೂರ್ವ ಕರಾವಳಿ ಸೇರಿದಂತೆ ಅನೇಕ ರಾಷ್ಟ್ರಗಳ ಜನರು ಸಾವಿಗೀಡಾಗಿದ್ದರು. ಆ ಕಹಿ ಘಟನೆಯನ್ನು ಜನರು ಇನ್ನೂ ಮರೆತಿಲ್ಲ. ಅದೇ ಕಾರಣಕ್ಕಾಗಿ, ಹಿಂದೂ ಮಹಾಸಾಗರದ ತಟದಲ್ಲಿರುವ ಎಲ್ಲಾ ದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ರವಾನಿಸಲಾಗಿದೆ.

