ನವದೆಹಲಿ : 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನಿರ್ಭಯಾ ಅವರ ತಾಯಿ ಆಶಾ ದೇವಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂದು ದೇಶವ್ಯಾಪಿ ವೈದ್ಯರು ಮುಷ್ಕರ ನಡೆಸಿದ್ದಾರೆ. ಇತ್ತ ಮುಷ್ಕರದ ಜೊತೆಗೆ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಹೆಚ್ಚಿನ ಆಗ್ರಹ ಕೇಳಿ ಬರುತ್ತಿದೆ, ಇದೆ ವೇಳೆ ಆಶಾ ದೇವಿ ಕೂಡ ರಾಜಿನಾಮೆಗೆ ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದ ಬಲಿಯಾದಲ್ಲಿ ಈ ಕುರಿತು ಮಾತನಾಡಿದ ಆಶಾ ದೇವಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಬ್ಬ ಮಹಿಳೆಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಪರಿಸ್ಥಿತಿ ನಿಭಾಯಿಸಲು ವಿಫಲರಾದ ಕಾರಣ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದು ನಿರ್ಭಯಾ ಅವರ ತಾಯಿ ಆಶಾ ದೇವಿ ಆಗ್ರಹಿಸಿದ್ದಾರೆ.

